ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಆಪ್ ಸರ್ಕಾರದ ನಡುವಿನ ಸಂಘರ್ಷ ಮತ್ತೆ ಉಲ್ಬಣಿಸಿದೆ. ದೆಹಲಿಯಲ್ಲಿ ಸೇವೆ/ಆಡಳಿತಗಳ ನಿಯಂತ್ರಣವು ಆಪ್ ಸರ್ಕಾರಕ್ಕೆ ಸೇರಿದೆ ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಎ ಗ್ರೂಪ್ ಅಧಿಕಾರಿಗಳ ವರ್ಗಾವಣೆ ಹಾಗೂ ಶಿಸ್ತು ಪ್ರಕ್ರಿಯೆಗಳ ಉಸ್ತುವಾರಿಗಾಗಿ ಕೇಂದ್ರ ಸರ್ಕಾರವು “ರಾಷ್ಟ್ರ ರಾಜಧಾನಿ ಸೇವಾ ಪ್ರಾಧಿಕಾರ”ವನ್ನು (NCCSA) ರಚಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಹಾಗಾಗಿ, ಆಪ್ ಸರ್ಕಾರವು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
“ಕೇಂದ್ರ ಸರ್ಕಾರವು ರಾತ್ರೋರಾತ್ರಿ ಅಧಿಕಾರಿಗಳ ವರ್ಗಾವಣೆ, ಶಿಸ್ತು ಪ್ರಕ್ರಿಯೆಗಳ ಮೇಲೆ ನಿಗಾ ಇಡುವುದು ಸೇರಿ ಹಲವು ದೃಷ್ಟಿಯಿಂದ ರಾಷ್ಟ್ರ ರಾಜಧಾನಿ ಸೇವಾ ಪ್ರಾಧಿಕಾರ ರಚನೆಗೆ ರಾತ್ರೋರಾತ್ರಿ ಸುಗ್ರೀವಾಜ್ಞೆ ಹೊರಡಿಸಿರುವುದು ಅಪ್ರಾಮಾಣಿಕ ಹಾಗೂ ವಿಶ್ವಾಸಘಾತುಕತನದ ನಿರ್ಧಾರ” ಎಂದು ದೆಹಲಿ ಶಿಕ್ಷಣ ಸಚಿವೆ ಆತಿಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದೆಹಲಿಯಲ್ಲಿ ಆಡಳಿತ ಸೇವೆಗಳ ನಿಯಂತ್ರಣವನ್ನು ಆಪ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವಹಿಸಿದೆ. ಆದರೂ, ಸುಪ್ರೀಂ ಕೋರ್ಟ್ ವಿರುದ್ಧವೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಚುನಾಯಿತ ಸರ್ಕಾರವೇ ದೆಹಲಿಯಲ್ಲಿ ಆಡಳಿತ ನಿಯಂತ್ರಣ ಮಾಡಬೇಕು ಎಂದು ಕೋರ್ಟ್ ಹೇಳಿದೆ. ಇದೇ ಪ್ರಜಾಪ್ರಭುತ್ವ ಆಗಿದೆ. ಆದರೆ, ಆಡಳಿತ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ” ಎಂದು ಹೇಳಿದ್ದಾರೆ.
“ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಆಡಳಿತ ನಡೆಸುವುದಿಲ್ಲ ಎಂದು ಸುಗ್ರೀವಾಜ್ಞೆ ಹೇಳಿದೆ. ಕೇಂದ್ರ ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷದ ಸರ್ಕಾರದ ಕುರಿತು ಭಯ ಇದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಭಯ ಇದೆ. ಹಾಗಾಗಿ ಸುಗ್ರೀವಾಜ್ಞೆ ಹೊರಡಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಗೆ ಕೇಂದ್ರ ಮೇಲ್ಮನವಿ
‘ದೆಹಲಿಯ ಕಾನೂನು ಸುವ್ಯವಸ್ಥೆ ಮತ್ತು ಭೂಮಿ ವಿಷಯವನ್ನು ಬಿಟ್ಟು, ಉಳಿದೆಲ್ಲ ಸೇವೆಗಳಿಗೆ ಸಂಬಂಧಪಟ್ಟ ಆಡಳಿತಾತ್ಮಕ ಅಧಿಕಾರ ಸ್ಥಳೀಯ ಪ್ರಜಾಪ್ರಭುತ್ವ ಸರ್ಕಾರದ್ದು’ ಎಂದು ಕಳೆದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಶನಿವಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.