Site icon Vistara News

Manish Sisodia Arrested: ದಿಲ್ಲಿ ಡಿಸಿಎಂ ಬಂಧನ ಬೆನ್ನಲ್ಲೇ ಆಪ್‌ನಿಂದ ಬೃಹತ್ ಪ್ರತಿಭಟನೆಗೆ ಪ್ಲ್ಯಾನ್, ದಿಲ್ಲಿಯಲ್ಲಿ ಭಾರಿ ಬಂದೋಬಸ್ತ್

AAP is Planning to protest nationwide and security upped in delhi

ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣದ (Delhi Liquor Policy Case) ಪ್ರಕರಣದಲ್ಲಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದ (Manish Sisodia Arrested:) ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ(AAP) ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದಿಲ್ಲಿಯ ಬಿಜೆಪಿ ಕಚೇರಿ ಎದುರು ಆಪ್ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಯೋಜನೆಯನ್ನು ರೂಪಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಇರುವ ದೀನ ದಯಾಳ ಉಪಾಧ್ಯಯ ಮಾರ್ಗದಲ್ಲಿ ಸಾಕಷ್ಟು ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದೇ ಮಾರ್ಗದಲ್ಲಿ ಬಿಜೆಪಿ ಮತ್ತು ಆಪ್ ಪಕ್ಷದ ಕಚೇರಿಗಳಿವೆ. ಆಪ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಟ್ರಾಪಿಕ್ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾನವಾರ ಮನೀಶ್ ಸಿಸೋಡಿಯಾ ಬಂಧನ

ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂದಿಸಿದಂತೆ ಕೇಂದ್ರ ತನಿಖಾ ದಳ(CBI)ದ ಅಧಿಕಾರಿಗಳು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ಬಂಧಿಸಿದ್ದಾರೆ. ಇನ್ನು ಬಂಧನ ಖಂಡಿಸಿ ಆಪ್‌ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಆಪ್‌ ಬೆಂಬಲಿಗರ ಭಾರಿ ಬೆಂಬಲದೊಂದಿಗೆ ಸಿಸೋಡಿಯಾ ಅವರು ಭಾನುವಾರ ದಿಲ್ಲಿಯ ಸಿಬಿಐ ಪ್ರಧಾನ ಕಚೇರಿಗೆ ಬೆಳಗ್ಗೆ ತೆರಳಿದರು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಈ ಹಿಂದೆ ಸಿಬಿಐ ನೋಟಿಸ್ ನೀಡಿತ್ತು. ಇದೇ ವೇಳೆ, ಮುಂದಿನ ಏಳೆಂಟು ತಿಂಗಳು ದೂರ ಹೋಗುವೆ ಎಂದು ಸಿಸೋಡಿಯಾ ಬಂಧನದ ಸುಳಿವು ನೀಡಿದ್ದರು. ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ.

ಏನಿದು ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣ?

ದೆಹಲಿ ಸರ್ಕಾರವು ೨೦೨೧ರಲ್ಲಿ ಜಾರಿಗೆ ತಂದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇ.ಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಬೆಳಗಿನ ಜಾವ ಮೂರು ಗಂಟೆವರೆಗೆ ಬಾರ್‌ಗಳು ಓಪನ್‌ ಇರುವುದು, ಸುಲಭವಾಗಿ ಲೈಸೆನ್ಸ್‌ ನೀಡುವುದು ಸೇರಿ ಹಲವು ಕ್ರಮಗಳುಳ್ಳ ನೀತಿಯ ಜಾರಿ ವೇಳೆ ತಮಗೆ ಬೇಕಾದವರಿಗೆ ಲೈಸೆನ್ಸ್‌ ನೀಡಲು ಆಪ್‌ 100 ಕೋಟಿ ರೂ. ಲಂಚ ಪಡೆದಿದೆ ಎಂಬುದು ಆರೋಪವಾಗಿದೆ. ಮನೀಶ್ ಸಿಸೋಡಿಯಾ ಅವರು ಅಬಕಾರಿ ಸಚಿವರಾದ ಕಾರಣ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸುವ ಜತೆಗೆ ಇದುವರೆಗೆ ಹಲವು ಬಾರಿ ವಿಚಾರಣೆ ನಡೆಸಲಾಗಿದೆ. ಈಗ ಕೊನೆಗೆ ಸಿಬಿಐ ಅಧಿಕಾರಿಗಳು ಮನೀಷ್‌ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಬಕಾರಿ ನೀತಿ ಅಕ್ರಮದಲ್ಲಿ ಮನೀಶ್​ ಸಿಸೋಡಿಯಾರೇ ಪ್ರಥಮ ಆರೋಪಿ; ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಿಬಿಐ ವಿಚಾರಣೆ ಆರಂಭಿಸುವಾಗಲೇ ನನ್ನನ್ನು ಬಂಧಿಸಲಾಗುತ್ತದೆ ಎಂದು ಸಿಸೋಡಿಯಾ ಹೇಳಿದ್ದರು. ಆದರೆ, ಎರಡು ತಿಂಗಳು ಸಿಸೋಡಿಯಾ ಅವರನ್ನು ಸಿಬಿಐ ವಿಚಾರಣೆಗೂ ಕರೆದಿರಲಿಲ್ಲ. ಈಗ ವಿಚಾರಣೆಗೆ ಕರೆದು ಬಂಧಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಆಪ್ ಸಚಿವ ಸತ್ಯೇಂದ್ರ ಸಿಂಗ್‌ ಜೈನ್‌ ಅವರನ್ನು ಬಂಧಿಸಲಾಗಿದೆ. ಈಗ ಮತ್ತೊಬ್ಬ ಸಚಿವ ಲಂಚ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ.

Exit mobile version