Site icon Vistara News

Manish Sisodia | ಪ್ರತಿಭಟನಾನಿರತ ಆಪ್ ನಾಯಕರ ಸೆರೆ, ಭ್ರಷ್ಟಾಚಾರದ ವರ್ಲ್ಡ್ ಕಪ್ ಗೆದ್ದ ಆಪ್: ಬಿಜೆಪಿ ವ್ಯಂಗ್ಯ

Manish Sisodia

ನವ ದೆಹಲಿ: ಲಿಕ್ಕರ್ ಪಾಲಿಸಿ ಹಗರಣದಲ್ಲಿ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿರುವುದನ್ನು ವಿರೋಧಿಸಿ ಸಂಸದ ಸಂಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತ ನಾಯಕರನ್ನು ದಿಲ್ಲಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಹಿಳಾ ಕಾರ್ಯಕರ್ತೆಯರೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ದಿಲ್ಲಿಯ ಸಿಬಿಐ ಕಚೇರಿ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಏತನ್ಮಧ್ಯೆ, ಆಪ್ ಕೈಗೊಂಡಿರುವ ರೋಡ್‌ಶೋವನ್ನು ಟೀಕಿಸಿರುವ ಬಿಜೆಪಿ, ಭ್ರಷ್ಟಾಚಾರದಲ್ಲಿ ಆಪ್ ವರ್ಲ್ಡ್ ಕಪ್ ಗೆದ್ದಿದೆ. ಅದಕ್ಕಾಗಿ ಮೆರವಣಿಗೆ ಮಾಡುತ್ತಿದೆ ಎಂದು ವ್ಯಂಗ್ಯ ಮಾಡಿದೆ.

ಮುಂಬರುವ ಗುಜರಾತ್ ಚುನಾವಣೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ತಮ್ಮನ್ನು ತಡೆಯುವುದಕ್ಕಾಗಿ ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಹಾಗಾಗಿಯೇ ಸಿಬಿಐ ತಮ್ಮನ್ನು ಬಂಧಿಸಲಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಸಿಬಿಐ ಕಚೇರಿಗೆ ತೆರಳುವ ಮುನ್ನ ಹೇಳಿದ್ದರು. ಅವರು ರೋಡ್ ಶೋ ಮೂಲಕವೇ ವಿಚಾರಣೆಗಾಗಿ ಸಿಬಿಐ ಕಚೇರಿಗೆ ಆಗಮಿಸಿದ್ದರು. ಈ ವೇಳೆ, ಮಹಾತ್ಮ ಗಾಂಧಿ ಸಮಾಧಿ ರಾಜ್ ಘಾಟ್‌ಗೂ ಭೇಟಿ ನೀಡಿ, ಅಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಇದೇ ವೇಳೆ, ಮನೀಶ್ ಸಿಸೋಡಿಯಾ ರೋಡ್ ಶೋ ಅನ್ನು ಟೀಕಿಸಿರುವ ಬಿಜೆಪಿಯ ವಕ್ತಾರ ಸಂಬೀತ್ ಪಾತ್ರ, ಓಪನ್ ಕಾರಿನಲ್ಲಿ ನಿಂತುಕೊಂಡು, ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮನೀಶ್ ಸಿಸೋಡಿಯಾ ಅವರು ಮಾಡುತ್ತಿರುವ ಘೋಷಣೆಗಳನ್ನುಕೇಳಿದರೆ, ಭ್ರಷ್ಟಾಚಾರದಲ್ಲಿ ಆಮ್ ಪಾರ್ಟಿ ಪಾರ್ಟಿ ವರ್ಲ್ಡ್ ಕಪ್ ಗೆದ್ದಿರುವ ರೀತಿ ಕಾಣುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇದೇ ವೇಳೆ, ಮನೀಶ್ ಸಿಸೋಡಿಯಾ ಅವರನ್ನು ಬೆಂಬಲಿಸಿರುವ ದಿಲ್ಲಿ ಮುಖ್ಯಮಂತ್ರ ಅರವಿಂದ್ ಕೇಜ್ರಿವಾಲ್ ಅವರು, ಡಿಸಿಎಂ ಮನೀಶ್ ಸಿಸೋಡಿಯಾ ವಿರುದ್ಧ ದಾಖಲಾಗಿರುವ ಕೇಸ್ ಸಂಪೂರ್ಣವಾಗಿ ಫೇಕ್ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ | ಅಬಕಾರಿ ನೀತಿ ಅಕ್ರಮದಲ್ಲಿ ಮನೀಶ್​ ಸಿಸೋಡಿಯಾರೇ ಪ್ರಥಮ ಆರೋಪಿ; ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖ

Exit mobile version