ನವದೆಹಲಿ: ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. ಅತ್ತ, ೫೦೦ ಬಸ್‌ಗಳ ಖರೀದಿ ಪ್ರಕರಣವನ್ನು ಲೆಫ್ಟಿನೆಂಟ್ ಗವರ್ನರ್ ಅವರು ತನಿಖೆಗೆ ಶಿಫಾರಸು ಮಾಡಿದ್ದಾರೆ. ಇದರ ಬೆನ್ನಲ್ಲೇ ಭ್ರಷ್ಟಾಚಾರ ಆರೋಪದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಅವರನ್ನು ಬಂಧಿಸಲಾಗಿದೆ.
ಎರಡು ವರ್ಷಗಳ ಹಿಂದೆ ದೆಹಲಿ ವಕ್ಫ್ ಬೋರ್ಡ್‌ಗೆ ಕಾನೂನುಬಾಹಿರವಾಗಿ ನೇಮಕ ಮಾಡಲಾಗಿದೆ ಹಾಗೂ ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಪ್ರಕರಣದಲ್ಲಿ ಶುಕ್ರವಾರ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಅಮಾನತುಲ್ಲಾ ಖಾನ್ ಅವರನ್ನು ವಿಚಾರಣೆ ನಡೆಸಿದೆ. ಇದಾದ ಬಳಿಕ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.
“ಅಮಾನತುಲ್ಲಾ ಖಾನ್ ಅವರು ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದಾಗ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ೩೨ ಜನರನ್ನು ನೇಮಕ ಮಾಡಿದ್ದಾರೆ. ಇದರಲ್ಲಿ ಸ್ವಜನ ಪಕ್ಷಪಾತದ ಆರೋಪವೂ ಇದೆ. ಅಕ್ರಮವಾಗಿ ನೇಮಕ ಮಾಡಿದ ಕುರಿತು ವಕ್ಫ್ ಬೋರ್ಡ್ ಸಿಇಒ ದಾಖಲಿಸಿದ ಹೇಳಿಕೆ ದಾಖಲಿಸಿದ್ದಾರೆ. ಹಾಗಾಗಿ, ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಲಾಗಿದೆ” ಎಂದು ಎಸಿಬಿ ತಿಳಿಸಿದೆ.
ಇದನ್ನೂ ಓದಿ | AAP In Trouble | ಸಾವಿರ ಬಸ್ ಖರೀದಿ ಕೇಸ್ ಸಿಬಿಐಗೆ, ಅರವಿಂದ ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ