ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನದ ಬಳಿಕ ಹಿನ್ನಡೆಯನ್ನು ಅನುಭವಿಸುತ್ತಿರುವ ಆಮ್ ಆದ್ಮಿ ಪಾರ್ಟಿ(AAP), ತನಗಾಗಿರುವ ನಷ್ಟವನ್ನು ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಬಂಧನಕ್ಕೆ ಸಂಬಂಧಿಸಿದಂತೆ ಆಪ್, ಮಾರ್ಚ್ 5ರಂದು ಡೋರ್ ಟು ಡೋರ್ ಕ್ಯಾಂಪೇನ್ ಮಾಡಲು ನಿರ್ಧರಿಸಿದೆ. ಸಿಸೋಡಿಯಾ ಹಾಗೂ ಜೈನ್ ಬಂಧನ ಹಿಂದಿನ ಸಂಚನ್ನು ಜನರಿಗೆ ತಿಳಿಸುವಂತೆ ಆಪ್ ಮುಖ್ಯಸ್ಥರೂ ಆಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆಪ್ ಶಾಸಕರಿಗೆ ಸೂಚಿಸಿದ್ದಾರೆ.
ಬುಧವಾರ ತಮ್ಮ ನಿವಾಸದಲ್ಲಿ ಸರಣಿ ಸಭೆಗಳನ್ನು ನಡೆಸಿದ ಅರವಿಂದ್ ಕೇಜ್ರಿವಾಲ್ ಅವರು, ದಿಲ್ಲಿಯಲ್ಲಿ ನಡೆಯುತ್ತಿರುವ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ಆ ಕಾರಣಕ್ಕಾಗಿ ಸಿಸೋಡಿಯಾ ಮತ್ತು ಜೈನ್ ಅವರನ್ನು ಬಂಧಿಸಿದೆ ಎಂಬ ಸತ್ಯವನ್ನು ಜನರಿಗೆ ತಿಳಿಸಿಕೊಡುವ ಟಾಸ್ಕ್ ಅನ್ನು ಕೇಜ್ರಿವಾಲ್ ಅವರು ಆಪ್ ನಾಯಕರು ಮತ್ತು ಶಾಸಕರಿಗೆ ನೀಡಿದ್ದಾರೆ.
ಇದನ್ನೂ ಓದಿ: Manish Sisodia: ಮನೀಷ್ ಸಿಸೋಡಿಯಾ ನಿರ್ವಹಿಸುತ್ತಿದ್ದ 18 ಖಾತೆಗಳ ಜವಾಬ್ದಾರಿ ಯಾರಿಗೆ?
ಇತ್ತೀಚಿಗೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಪ್ ಶಾಸಕರು ಮತ್ತು ಎಂಸಿಡಿ ಕೌನ್ಸಿಲರ್‌ಗಳ ಸಭೆಯನ್ನು ಅರವಿಂದ್ ಕೇಜ್ರಿವಾಲ್ ಅವರು ನಡೆಸಿದರು. ಅಲ್ಲದೇ ಮುಂದೆ ಆಪ್ ಕೈಗೊಳ್ಳಬೇಕಾದ ಕ್ರಮಗಳು, ನಡೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎನ್ನಲಾಗಿದೆ.
ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಆಪ್ ನಾಯಕರನ್ನು ಬಂಧಿಸುತ್ತಿದೆ. ಸತ್ಯೇಂದ್ರ ಜೈನ್ ಆಗಲಿ, ಮನೀಶ್ ಸಿಸೋಡಿಯಾ ಅವರು ಬಿಜೆಪಿ ಸೇರ್ಪಡೆಯಾದರೆ ಅವರ ವಿರುದ್ಧ ಎಲ್ಲ ಕೇಸ್ ಸರ್ಕಾರ ವಾಪಸ್ ಪಡೆಯುತ್ತದೆ! ಅವರನ್ನು ಪ್ರಶ್ನಿಸುವವರ ವಿರುದ್ಧ ಇ.ಡಿ ಮತ್ತು ಸಿಬಿಐ ಸಂಸ್ಥೆಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.