ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi excise policy case) ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿಯ ಸಂಸದ ಸಂಜಯ್ ಸಿಂಗ್ (AAP MP Sanjay Singh) ಅವರನ್ನು ಜಾರಿ ನಿರ್ದೇಶನಾಲಯವು ಬುಧವಾರ ಸಂಜೆ ಬಂಧಿಸಿದೆ. ಇದಕ್ಕೂ ಮೊದಲು ಬೆಳಗ್ಗೆಯಿಂದಲೇ ಇಡಿ ಅಧಿಕಾರಿಗಳು (Enforcement Directorate) ಸಂಜಯ್ ಸಿಂಗ್ ಅವರ ದಿಲ್ಲಿ ನಿವಾಸಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿತು. ಬಳಿಕ, ಸಂಜೆ ಹೊತ್ತಿಗೆ ಅವರನ್ನು ತಮ್ಮ ವಶಕ್ಕೆ ಪಡೆದು ಬಂಧಿಸಿತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲಾಗಿರುವ ಸಿಂಗ್, ಕೆಲವು ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭದಾಯಕವಾದ ಹಾಗೂ ಈಗ ರದ್ದಾದ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಈ ವರ್ಷದ ಮೇ ತಿಂಗಳಲ್ಲಿ, ಬಂಧಿತ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಇಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ದಿನೇಶ್ ಅರೋರಾ ಎಂಬ ಹೊಟೇಲಿಯರ್, ಸಿಂಗ್ ಮತ್ತು ಸಿಸೋಡಿಯಾ ಇಬ್ಬರಿಗೂ ಅತ್ಯಂತ ನಿಕಟವಾಗಿದ್ದಾರೆ ಆರೋಪಿಸಿತ್ತು. ಬಳಿಕ ಅರೋರಾ ಅವರನ್ನು ಇಡಿ ಜುಲೈನಲ್ಲಿ ಬಂಧಿಸಿತ್ತು. 2020ರಲ್ಲಿ ಅರೋರಾ ಅವರಿಗೆ ಕಾಲ್ ಮಾಡಿದ್ದ ಸಂಜಯ್ ಸಿಂಗ್ ಅವರು, ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ ಮತ್ತು ಎಎಪಿಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದರೆಂಬ ಆರೋಪವನ್ನು ಇಡಿ ಹೊರಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ (Delhi Liquor Scam) ಆಮ್ ಆದ್ಮಿ ಪಕ್ಷದ ನಾಯಕರೂ ಆದ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ (Sanjay Singh) ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿರುವ ಸಂಜಯ್ ಸಿಂಗ್ ನಿವಾಸದಲ್ಲಿ ಇನ್ನೂ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ದಾಳಿಯ ವಿಡಿಯೊ ಲಭ್ಯವಾಗಿದೆ.
ಈ ಸುದ್ದಿಯನ್ನೂ ಓದಿ: Delhi liquor policy case: ವಿಚಾರಣೆಗೆ ಹಾಜರಾಗಲು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್
ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಕೂಡ ಸಂಜಯ್ ಸಿಂಗ್ ಅವರ ಆಪ್ತ ನಿವಾಸಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಈಗ ಸಂಜಯ್ ಸಿಂಗ್ ಅವರ ನಿವಾಸಕ್ಕೇ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ದಾಳಿ ಕುರಿತು ಸಂಜಯ್ ಸಿಂಗ್ ಅವರ ತಂದೆ ಪ್ರತಿಕ್ರಿಯಿಸಿದ್ದು, “ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ನಾವು ಅವರಿಗೆ ಸಹಕಾರ ನೀಡುತ್ತಿದ್ದೇವೆ. ನನ್ನ ಮಗ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರಲಿದ್ದಾನೆ” ಎಂದು ಹೇಳಿದ್ದಾರೆ.
ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸಂಜಯ್ ಸಿಂಗ್ ಹೆಸರು ಉಲ್ಲೇಖವಿದೆ. ಇನ್ನು ಇ.ಡಿ ದಾಳಿ ಕುರಿತು ಆಪ್ ಆಕ್ರೋಶ ವ್ಯಕ್ತಪಡಿಸಿದೆ. “ಸಂಜಯ್ ಸಿಂಗ್ ಅವರು ಅದಾನಿ ಪ್ರಕರಣದ ಕುರಿತು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಹಾಗಾಗಿ, ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇದಕ್ಕೂ ಮೊದಲು ಕೂಡ ಇ.ಡಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ, ಮುಂದೆಯೂ ಸಿಗುವುದಿಲ್ಲ” ಎಂದಿದ್ದಾರೆ.