ನವದೆಹಲಿ: 2024ರ ಲೋಕಸಭೆ ಚುನಾವಣೆಯನ್ನು (Lok Sabha 2023) ಎದರಿಸಲು ಪ್ರತಿಪಕ್ಷಗಳು ಇಂಡಿಯಾ (India bloc) ಹೆಸರಿನಡಿ ಕೂಟವನ್ನು ರಚಿಸಿಕೊಂಡಿವೆ. ಆದರೆ, ಈ ಕೂಟದ ಪ್ರಮುಖ ಪಕ್ಷವಾಗಿರುವ ಆಮ್ ಆದ್ಮಿ ಪಾರ್ಟಿ(Aam Aadmi Party) ಮುಂಬರುವ ಮಧ್ಯ ಪ್ರದೇಶ(Madhya Pradesh), ಛತ್ತೀಸ್‌ಗಢ (Chhattisgarh) ಮತ್ತು ರಾಜಸ್ಥಾನ(Rajasthan) ವಿಧಾನಸಭೆ ಚುನಾವಣೆಯಲ್ಲಿ (Assembly Election) ಸ್ಪರ್ಧಿಸುವುದಾಗಿ ಹೇಳಿದೆ. ಅಲ್ಲದೇ, ಶೀಘ್ರವೇ ಅಬ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಆಪ್‌ನ ರಾಷ್ಟ್ರೀಯ ಸಂಚಾಲಕರೂ ಆಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ. ಇದರೊಂದಿಗೆ ಇಂಡಿಯಾ ಕೂಟದ ಒಗ್ಗಟ್ಟಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ.
ಭಾರತೀಯ ಕೇಂದ್ರ ಚುನಾವಣಾ ಆಯೋಗ ಮಿಜೋರಾಂ, ಛತ್ತೀಸ್‌ಗಢ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ಚುನಾವಣೆಗಳು ನವೆಂಬರ್ 7ರಿಂದ ಆರಂಭವಾಗಲಿದ್ದು, ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶವು ಪ್ರಕಟವಾಗಲಿದೆ.
ಈ ಸುದ್ದಿಯನ್ನೂ ಓದಿ: INDIA Bloc: ಇಂಡಿಯಾ ಒಕ್ಕೂಟದಲ್ಲಿ ಬಿಕ್ಕಟ್ಟು; ಟಿಎಂಸಿ, ಕಾಂಗ್ರೆಸ್ ಜತೆ ಮೈತ್ರಿಗೆ ಸಿಪಿಎಂ ನಕಾರ
ಆಪ್ ಕೂಡ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ಪೂರ್ಣ ಪ್ರಮಾಣದಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. ಇಂಡಿಯಾ ಕೂಟದ ಭಾಗವಾಗಿಯೇ ಸ್ಪರ್ಧಿಸಲಿದೆಯೇ ಎಂಬ ಪ್ರಶ್ನೆಗೆ, ಏನೇನು ಆಗುತ್ತದೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಎಂದು ಅವರು ಹೇಳಿದರು.
ನವೆಂಬರ್ 7ರಿಂದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ದೊರೆಯಲಿದೆ. ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿವೆ. ಕಾಂಗ್ರೆಸ್ ಮತ್ತು ಆಪ್ ಇಂಡಿಯಾ ಕೂಟದ ಪಾಲುದಾರ ಪಕ್ಷಗಳಿವೆ.