ನವದೆಹಲಿ: ಪಶ್ಚಿಮ ಬಂಗಾಳದಲ್ಲಿ (West Bengal) ಕಾಂಗ್ರೆಸ್ ಜತೆ ಮೈತ್ರಿ ಇಲ್ಲ (Congress Party) ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಅವರು ಘೋಷಿಸಿದ ಬೆನ್ನಲ್ಲೇ, ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲೂ (Punjab) ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಭಗವಂತ್ ಮಾನ್ ಅವರು ಹೇಳಿದ್ದಾರೆ. ಇದರೊಂದಿಗೆ, ಇಂಡಿಯಾ ಕೂಟದ (India Bloc) ಪ್ರಮುಖ ಪಕ್ಷಗಳಾದ ಟಿಎಂಸಿ ಮತ್ತು ಆಪ್ ಎರಡೂ ಮೈತ್ರಿಯಿಂದ ಹೊರ ಬಿದ್ದಂತಾಗಿದೆ. ರಾಮ ಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾಗಲಿದೆ ಎಂಬ ಕಾರಣಕ್ಕಾಗಿ ಪ್ರಾದೇಶಿಕ ಪಕ್ಷಗಳು ಮೈತ್ರಿ ಕೂಟದಿಂದ ದೂರು ಸರಿಯುತ್ತಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಪಂಜಾಬ್ ದೇಶದಲ್ಲಿ ಹೀರೋ ಆಗಲಿದೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಆಪ್ 13-0 ಅಂತರದಲ್ಲಿ ಪಂಜಾಬ್ ಗೆಲ್ಲಲಿದೆ. ನಾವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಭಗವಂತ್ ಮಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದಕ್ಕೂ ಮೊದಲು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಘೋಷಣೆ ಮಾಡಿದ್ದರು. ನಾನು ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ, ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ದೇಶದಲ್ಲಿ ಏನು ಮಾಡಲಾಗುವುದು ಎಂಬುದರ ಬಗ್ಗೆ ನನಗೆ ಸಂಬಂಧಿಸಿದ್ದಲ್ಲ. ಆದರೆ ನಾವು ಜಾತ್ಯತೀತ ಪಕ್ಷವಾಗಿದ್ದೇವೆ ಮತ್ತು ಬಂಗಾಳದಲ್ಲಿ ನಾವೇ ಬಿಜೆಪಿಯನ್ನು ಸೋಲಿಸುತ್ತೇವೆ. ನಾವು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇವೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ 300 ಸ್ಥಾನಗಳ ಮೇಲೆ ಸ್ಪರ್ಧಿಸಲಿ. ಉಳಿದ ಸ್ಥಾನಗಳಲ್ಲಿ ಪ್ರಾದೇಶಿಕ ಪಕ್ಷಗಳು ಸೇರಿ ಸ್ಪರ್ಧೆ ಮಾಡಲಿ. ಹಾಗಿದ್ದೂ, ನಾವು ಕಾಂಗ್ರೆಸ್ ಪಕ್ಷದ ಯಾವುದೇ ಹಸ್ತಕ್ಷೇಪವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:INDIA Bloc Protest: ಬಿಜೆಪಿ ಸಂಸದರು ಹೆದರಿ ಓಡಿ ಹೋಗಿದ್ದರು! ರಾಹುಲ್ ಗಾಂಧಿ ಲೇವಡಿ