Site icon Vistara News

Abhijit Gangopadhyay: ರಾಜೀನಾಮೆ ನೀಡಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಅಭಿಜಿತ್‌ ಗಂಗೋಪಾಧ್ಯಾಯ; ರಾಜಕೀಯ ಪ್ರವೇಶ ಸಾಧ್ಯತೆ

abhijith

abhijith

ನವದೆಹಲಿ: ಕೋಲ್ಕತ್ತಾ ಹೈಕೋರ್ಟ್‌ನ (Calcutta high court) ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ (Abhijit Gangopadhyay) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಿವೃತ್ತರಾಗಲಿದ್ದ ಅವರು, ಸೇವಾವಧಿ ಇನ್ನೂ ಒಂಬತ್ತು ತಿಂಗಳು ಇರುವಾಗಲೇ ಪದವಿ ತ್ಯಾಗದ ನಿರ್ಧಾರ ಕೈಗೊಂಡಿದ್ದಾರೆ. ಅಭಿಜಿತ್‌ ಗುರುವಾರ (ಮಾರ್ಚ್‌ 7) ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಅನೇಕ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್‌ ಸರ್ಕಾರಕ್ಕೆ ಮುಜುಗುರ ಉಂಟು ಮಾಡುವ ತೀರ್ಪು ನೀಡಿದ್ದ ಅಭಿಜಿತ್‌ ಗಂಗೋಪಾಧ್ಯಾಯ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ ತಮ್ಲುಕ್ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ತಮ್ಲುಕ್ ಕ್ಷೇತ್ರವು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು, 2009ರಿಂದ ಇಲ್ಲಿ ಟಿಎಂಸಿ ಜಯಿಸುತ್ತಾ ಬಂದಿದೆ.

ಭಾನುವಾರ ರಾಜೀನಾಮೆ ನೀಡುವ ನಿರ್ಧಾರವನ್ನು ಘೋಷಿಸಿದ ಗಂಗೋಪಾಧ್ಯಾಯ ಅವರಿಗೆ ತೃಣಮೂಲ ಕಾಂಗ್ರೆಸ್‌ನ ವಕ್ತಾರ ಕುನಾಲ್ ಘೋಷ್ ತಮ್ಮ ಪಕ್ಷಕ್ಕೆ ಸೇರಲು ಆಹ್ವಾನಿಸಿದ್ದರು. 62 ವರ್ಷದ ಗಂಗೋಪಾಧ್ಯಾಯ ಅವರು 2018ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಹೈಕೋರ್ಟ್‌ಗೆ ಸೇರಿದ್ದರು. 2020ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡ ಅವರು ಅದಕ್ಕೂ ಮೊದಲು ಪಶ್ಚಿಮ ಬಂಗಾಳದ ನಾಗರಿಕ ಸೇವಾ ಅಧಿಕಾರಿಯಾಗಿದ್ದರು. ವಕೀಲರಾಗುವ ಉದ್ದೇಶದಿಂದ ಒಂದು ದಶಕದ ಹಿಂದೆ ತಮ್ಮ ಕೆಲಸವನ್ನು ತೊರೆದಿದ್ದರು.

ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಪ್ರಕರಣಗಳಲ್ಲಿ ತ್ವರಿತ ತೀರ್ಪು ನೀಡುವ ಮೂಲಕ ಅವರು ಜನಪ್ರಿಯರಾಗಿದ್ದರು. 2014 ಮತ್ತು 2021ರ ನಡುವೆ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿಯು ಬೋಧಕೇತರ ಸಿಬ್ಬಂದಿ (ಗ್ರೂಪ್ ಸಿ ಮತ್ತು ಡಿ) ಮತ್ತು ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿರುವ ಬಗ್ಗೆ ತನಿಖೆ ನಡೆಸುವಂತೆ ಅವರು 2022ರ ಮೇಯಲ್ಲಿ ಕೇಂದ್ರ ತನಿಖಾ ದಳಕ್ಕೆ (CBI) ಆದೇಶ ನೀಡಿದ್ದರು.

ಸಮಾನಾಂತರ ತನಿಖೆಯನ್ನು ಪ್ರಾರಂಭಿಸಿದ ಜಾರಿ ನಿರ್ದೇಶನಾಲಯ (ED) 2022ರ ಜುಲೈಯಲ್ಲಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕರಾದ ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿತ್ತು. ಇವರಿಬ್ಬರಿಂದ 103.10 ಕೋಟಿ ರೂ.ಗಳ ನಗದು, ಆಭರಣಗಳು ಮತ್ತು ಸ್ಥಿರಾಸ್ತಿಯನ್ನು ಪತ್ತೆಹಚ್ಚಲಾಗಿದೆ ಎಂದು ಇ.ಡಿ ತಿಳಿಸಿದೆ. ನಂತರ ಇದೇ ಪ್ರಕರಣದಲ್ಲಿ ಹಲವು ಟಿಎಂಸಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Tapas Roy: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತೊರೆದ ಹಿರಿಯ ನಾಯಕ ತಪಸ್​ ರಾಯ್; ಕಾರಣವೇನು?

2023ರ ಏಪ್ರಿಲ್‌ನಲ್ಲಿ ಗಂಗೋಪಾಧ್ಯಾಯ ಮತ್ತೊಂದು ಮಹತ್ವದ ಆದೇಶ ನೀಡಿ ರಾಜ್ಯದ ನಾಗರಿಕ ಸಂಸ್ಥೆಗಳಲ್ಲಿನ ಶಂಕಿತ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದ್ದರು. ಈ ಎರಡು ಹಗರಣಗಳಿಗೆ ಸಂಬಂಧವಿದೆ ಎಂದು ಸಿಬಿಐ ಮತ್ತು ಇ.ಡಿ ಎರಡೂ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಅವರ ಪತ್ನಿ ಮತ್ತು ಅವರ ಪೋಷಕರು ಶಾಲಾ ನೇಮಕಾತಿ ಹಗರಣದಲ್ಲಿ ಶಂಕಿತರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version