ಕಟಕ್, ಒಡಿಶಾ: ಅವಮಾನಿಸುವ ಉದ್ದೇಶ ಇಲ್ಲದೇ, ಹಿಂದು ಮುಂದೆ ಯೋಚನೆ ಮಾಡದೇಆ ಸಿಟ್ಟಿನ ಕ್ಷಣದಲ್ಲಿ ನಿಂದಿಸಿದ ಮಾತ್ರಕ್ಕೆ ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ(ST) ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದು ಸಮರ್ಥನೀಯವಲ್ಲ ಎಂದು ಒರಿಸ್ಸಾ ಹೈಕೋರ್ಟ್ (Orissa High Court) ಅಭಿಪ್ರಾಯಪಟ್ಟಿದೆ.
ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಜಾತಿ ನಿಂದನೆಯ ಮೂಲಕ ಅವಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಬಡಗಡ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪರಿಣಾಮ ಎಫ್ಐಆರ್ ಹಾಕಲಾಗಿತ್ತು. ಈ ಬಗ್ಗೆ ತೀರ್ಪು ನೀಡಿದ್ದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಆದೇಶವನ್ನು ಒರಿಸ್ಸಾ ಹೈಕೋರ್ಟ್ ರದ್ದು ಮಾಡಿ, ಆ ಕ್ಷಣದಲ್ಲಿ ವ್ಯಕ್ತಿಯ ಜಾತಿ ಹೆಸರಿನಿಂದ ನಿಂದಿಸಿದರೆ ಕಾಯ್ದೆ ಅನ್ವಯಿಸಲಾಗದು ಎಂದು ಹೇಳಿದೆ.
ಇದನ್ನೂ ಓದಿ: ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ
ಆಪಾದಿತನು ಸೆಷನ್ಸ್ ಕೋರ್ಟ್‌ನ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಒರಿಸ್ಸಾ ಹೈಕೋರ್ಟ್ ಜಸ್ಟೀಸ್ ಆರ್ ಕೆ ಪಟ್ನಾಯಿಕ್ ಅವರಿದ್ದ ಏಕ ಸದಸ್ಯ ಪೀಠವು, ಯಾರಾದರೂ ಅವರ ಜಾತಿಯ ಹೆಸರಿನಿಂದ ನಿಂದನೆಗೆ ಒಳಗಾಗಿದ್ದರೆ, ಘಟನೆಗಳ ಸಂದರ್ಭದಲ್ಲಿ ಮತ್ತು ಘಟನೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಜಾತಿಯನ್ನು ಹೆಸರಿಸಿದರೆ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಅನ್ವಯಿಸಲಾಗದು. ಸಂತ್ರಸ್ತ ವ್ಯಕ್ತಿಯನ್ನು ಅವಮಾನಿಸುವುದು ಅಥವಾ ಅವಮಾನಿಸುವುದೇ ಉದ್ದೇಶದಿಂದಲೇ ಜಾತಿ ನಿಂದನೆ ಮಾಡಿದರೆ ಮಾತ್ರವೇ ಕಾಯ್ದೆ ಅನ್ವಯವಾಗುತ್ತದೆ ಎಂದು ತೀರ್ಪಿನ ತಿಳಿಸಿದೆ.