ಅಹಮದಾಬಾದ್: ಬಿಸಿಲಿನ ತಾಪ ಸಿಕ್ಕಾಪಟ್ಟೆ ಹೆಚ್ಚಿದೆ. ಮನೆಯಲ್ಲಿ, ಆಫೀಸ್ ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ಸಣ್ಣಗೆ ಬೆವರುತ್ತಿದ್ದಾರೆ. ಇನ್ನು ಹೊರಗಡೆ ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದು. ಅದರಲ್ಲೂ ಸುಡುಬಿಸಿಲನ್ನೂ ಲೆಕ್ಕಿಸದೇ ಕರ್ತವ್ಯನಿರತರಾಗಿರುವ ಟ್ರಾಫಿಕ್ ಪೊಲೀಸರ (Traffic Police) ಪಾಡಂತೂ ವಿವರಿಸಲು ಅಸಾಧ್ಯ. ಸುಡುವ ಇವರ ನೆತ್ತಿ ತಣ್ಣಗಿರಲಿ ಎಂದು ಎಸಿ ಹೆಲ್ಮಟ್ (AC Helmet) ಎಂಬ ವಿಶೇಷವಾದ ಹೆಲ್ಮೆಟ್ ಅನ್ನು ಪರಿಚಯಿಸಲಾಗಿದೆ. ಏನಿದು ಎಂಬ ಕುತೂಹಲ ನಿಮಗೂ ಇರಬಹುದು. ಇದಕ್ಕೆ ಸಂಬಂಧಪಟ್ಟ ಮಾಹಿತಿಗಳು ಇಲ್ಲಿವೆ.
ಸುಡುವ ಬಿಸಿಲಿನಲ್ಲಿ ನಿಂತು ಕಾರ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಇದು ಖುಷಿ ನೀಡುವ ಸಂಗತಿಯಾಗಿದೆ. ಬಿಸಿಲಿನ ತಾಪವನ್ನು ನಿಭಾಯಿಸಲು ಅಹಮದಾಬಾದ್ ಪೊಲೀಸರು ವಿಶೇಷ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅಹಮದಾಬಾದ್ ನಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಐದು ಜನ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್ ಗಳ್ನು ನೀಡಿದ್ದಾರೆ. ಟ್ರಾಫಿಕ್ ಪೊಲೀಸರು ಎಸಿ ಹೆಲ್ಮೆಟ್ ಧರಿಸಿ ಖುಷಿಯಲ್ಲಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದ್ಯದಲ್ಲಿ ಅಹಮದಾಬಾದ್ ನ ಪಿರಾನಾ, ಥಕ್ಕರ್ ನಗರ ಮತ್ತು ನಾನಾ ಚಿಲೋಡ್ ಪ್ರದೇಶಗಳನ್ನು ಈ ಎಸಿ ಹೆಲ್ಮೆಟ್ ಗಳ ಪ್ರಾಯೋಗಿಕ ಹಂತಕ್ಕಾಗಿ ಆಯ್ಕೆ ಮಾಡಲಾಗಿದೆ. ಇದು ಯಶಸ್ವಿಯಾದರೆ ನಗರದ ಎಲ್ಲಾ ಟ್ರಾಫಿಕ್ ಅಧಿಕಾರಿಗಳಿಗೆ ಹೆಲ್ಮೆಟ್ ಗಳನ್ನು ವಿತರಿಸಲಾಗುವುದು ಎನ್ನಲಾಗಿದೆ.
ಈ ಹೆಲ್ಮೆಟ್ ಗಳು ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ಫ್ಯಾನ್ ರೀತಿಯ ಅಂತರ್ನಿರ್ಮಿತ ರಚನೆಯನ್ನು ಹೊಂದಿರುವ ಪ್ಲಾಸ್ಟಿಕ್ ಟಾಪ್ ಅನ್ನು ಒಳಗೊಂಡಿದೆ. ಈ ಹೆಲ್ಮೆಟ್ ಅನ್ನು ತಂಪಾಗಿಸುವ ಕಾರ್ಯವನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಸೊಂಟದ ಸುತ್ತಲೂ ಆರಾಮವಾಗಿ ಕಟ್ಟಿಕೊಂಡಿರುವ ಬ್ಯಾಟರಿ ಮಾಡುತ್ತದೆ. ಈ ಹೆಲ್ಮೆಟ್ ಗಳು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆಯಂತೆ. ಇದು ತಂಪಾಗಿಸುವುದರ ಜೊತೆಗೆ ಟ್ರಾಫಿಕ್ ಪೊಲೀಸರನ್ನು ಧೂಳು, ಮಾಲಿನ್ಯಕಾರಕಗಳಿಂದ ರಕ್ಷಣೆ ಕೂಡ ನೀಡುತ್ತದೆಯಂತೆ. ಹಾಗೇ ಈ ಹೆಲ್ಮೆಟ್ ಸಾಮಾನ್ಯ ಹೆಲ್ಮೆಟ್ ಗಳಿಗೆ ಹೋಲಿಸಿದರೆ 500ಗ್ರಾಂಗಳಷ್ಟು ಭಾರವನ್ನು ಹೊಂದಿದೆಯಂತೆ.
AC helmets provided to traffic police in Gujarat
— The Index of Gujarat (@IndexofGujarat) August 19, 2023
🔸It provides a 4 to 5-degree relief from the heat
🔸Pirana, Thakkar Nagar, and Nana Chiloda in Ahmedabad are selected for the pilot project
🔸If this pilot project succeeds, it will be given to all the traffic policemen in the… pic.twitter.com/xsjnnQ8ooH
ಈ ಎಸಿ ಹೆಲ್ಮಟ್ ಗಳ ಪ್ರಾಯೋಗಿಕ ಹಂತವು ಆಗಸ್ಟ್ 10, 2023ರಂದು ಪ್ರಾರಂಭವಾಯಿತು. ಇದೀಗ ಅವು ಪ್ರಾಯೋಗಿಕ ಹಂತದಲ್ಲಿದ್ದು, ಯಾವುದೇ ಸಮಸ್ಯೆಯಾಗದೆ ಅನುಕೂಲಕರವಾಗಿದ್ದರೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ವಿತರಿಸಲಾಗುತ್ತದೆಯಂತೆ.
ಇದನ್ನೂ ಓದಿ: Rowdy Sheeters: ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಮಚ್ಚು ಲಾಂಗ್, ಬೀದಿಯಲ್ಲೇ ಅಟ್ಟಾಡಿಸಿದರು!
ಈ ಕುರಿತು ಮಾತನಾಡಿದ ಅಹಮದಾಬಾದ್ ನ ಸಂಚಾರ ಪೂರ್ವದ ಉಪಪೊಲೀಸ್ ಕಮಿಷನರ್ ಸಫಿನ್ ಹಸನ್, “ಎಸಿ ಹೆಲ್ಮೆಟ್ ಗಳನ್ನು ಪ್ರತಿಕ್ರಿಯೆಗಾಗಿ ಹಿರಿಯ ಅಧಿಕಾರಿಗಳು ನನಗೆ ಹಸ್ತಾಂತರಿಸಿದ್ದಾರೆ. ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ ನಾವು ಮೂರು ಸ್ಥಳಗಳಲ್ಲಿ ಇದನ್ನು ಪ್ರಾಯೋಗಿಕ ಹಂತವಾಗಿ ಬಳಸಲಾಗಿದೆ. ಇದು 8 ಗಂಟೆಗಳ ಕಾಲ ಕೆಲಸ ಮಾಡಲಿದ್ದು, ಟ್ರಾಫಿಕ್ ಪೊಲೀಸರನ್ನು ಮಾಲಿನ್ಯ ಮತ್ತು ಧೂಳಿನಿಂದ ರಕ್ಷಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಆರಂಭದಲ್ಲಿ ಹೆಲ್ಮೆಟ್ ಗಳನ್ನು ಪರಿಚಯಿಸುವ ಮೊದಲು ಕಾರ್ಟ್ರಿಡ್ಜ್ ಮಾಸ್ಕ್ ಗಳನ್ನು ಪ್ರಯೋಗಿಸಿದ್ದೇವೆ. ಆದರೆ ದುರದೃಷ್ಟವಶಾತ್ ಅವು ತೃಪ್ತಿಕರ ಫಲಿತಾಂಶಗಳನ್ನು ನೀಡಲಿಲ್ಲ ಮತ್ತು ಅಧಿಕಾರಿಗಳಿಗೆ ಉಸಿರಾಟದ ಸಮಸ್ಯೆಯನ್ನು ಉಂಟುಮಾಡಿದೆ” ಎಂಬುದಾಗಿ ಅವರು ತಿಳಿಸಿದ್ದಾರೆ.