Site icon Vistara News

ACB Raid: ಭ್ರಷ್ಟಾಚಾರ ನಿಗ್ರಹ ದಳದ ಭರ್ಜರಿ ಬೇಟೆ; 100 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

acb

acb

ಹೈದರಾಬಾದ್‌: ಭ್ರಷ್ಟಾಚಾರ ನಿಗ್ರಹ ದಳ (Anti-Corruption Bureau)ದ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಹೈದರಾಬಾದ್​ನ ಅಧಿಕಾರಿಯೊಬ್ಬರ ಮನೆಯಿಂದ ಬರೋಬ್ಬರಿ 40 ಲಕ್ಷ ರೂ. ನಗದು ಹಾಗೂ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ (ACB Raid). ತೆಲಂಗಾಣ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (TSRERA)ದ ಕಾರ್ಯದರ್ಶಿ ಮತ್ತು ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್‌ ಅಥಾರಿಟಿ (TSRERA)ಯ ಮಾಜಿ ನಿರ್ದೇಶಕ ಶಿವ ಬಾಲಕೃಷ್ಣ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಈ ಅಪಾರ ಪ್ರಮಾಣದ ಸಂಪಾದನೆಯನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲವು ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಬಾಲಕೃಷ್ಣ ಪರವಾನಗಿಗಳನ್ನು ಕೊಡಿಸಿದ್ದಾರೆ. ಇದು ಕೋಟಿಗಟ್ಟಲೆ ಅಕ್ರಮ ಆಸ್ತಿಗಳ ಸಂಗ್ರಹಕ್ಕೆ ಕಾರಣವಾಗಿದೆ ಎಂದು ಎಸಿಬಿ ತಿಳಿಸಿದೆ. ಅಧಿಕಾರಿಗೆ ಸಂಬಂಧಿಸಿದ ಸುಮಾರು 20 ಸ್ಥಳಗಳಲ್ಲಿ 14 ತಂಡಗಳು ಶೋಧ ನಡೆಸುತ್ತಿವೆ.

ಮನೆ, ಕಚೇರಿಗಳಲ್ಲಿ ಶೋಧ

ಎಸಿಬಿ ಅಧಿಕಾಗಳ ತಂಡ ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆ, ಕಚೇರಿಗಳಲ್ಲಿ ವ್ಯಾಪಕ ಶೋಧ ನಡೆಸಿವೆ. ಅವರು ಆದಾಯದ ಮೂಲಗಳನ್ನು ಮೀರಿ ಆಸ್ತಿಗಳನ್ನು ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. ಬುಧವಾರ (ಜನವರಿ 24) ಬೆಳಗ್ಗೆ 5 ಗಂಟೆಗೆ ಪ್ರಾರಂಭವಾದ ಶೋಧ ಕಾರ್ಯವು ಇಂದು ಕೂಡ ಮುಂದುವದಿದೆ. ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಅವರು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಈ ಭಾರಿ ಸಂಪತ್ತನ್ನು ಸಂಗ್ರಹಿಸಿರಬಹುದು ಎಂಬ ಅನುಮಾನ ಹುಟ್ಟು ಹಾಕಿದೆ.

ವಶಪಡಿಸಿಕೊಂಡ ಸೊತ್ತುಗಳು

ಶೋಧದ ವೇಳೆ 2 ಕೆಜಿಗೂ ಅಧಿಕ ಚಿನ್ನ, ಫ್ಲಾಟ್‌ ಡಾಕ್ಯುಮೆಂಟ್‌, ಬ್ಯಾಂಕ್‌ ಡೆಪಾಸಿಟ್‌ ಪತ್ತೆಯಾಗಿದೆ. ಬೇನಾಮಿ ಹೆಸರಿನಲ್ಲಿನ ಅಪಾರ ಆಸ್ತಿ ಇರುವ ಬಗ್ಗೆ ಎಸಿಬಿ ತೀವ್ರ ತನಿಖೆ ನಡೆಸುತ್ತಿದೆ. ಅಕ್ರಮ ಆಸ್ತಿಯ ಒಟ್ಟಾರೆ ಮೌಲ್ಯ 100 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 40 ಲಕ್ಷ ರೂ. ನಗದು, 60 ಹೈ ಎಂಡ್ ಕೈಗಡಿಯಾರಗಳು, 14 ಫೋನ್‌ಗಳು, 10 ಲ್ಯಾಪ್‌ಟಾಪ್‌ಗಳು ಮತ್ತು ಹಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಾಲಕೃಷ್ಣ 200 ಕೋಟಿ ರೂ.ಗೂ ಹೆಚ್ಚು ಆಸ್ತಿ ಸಂಗ್ರಹಿಸಿದ್ದಾರೆ ಎಂದು ಎಸಿಬಿ ಶಂಕೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: IT Raids: 353 ಕೋಟಿ ರೂ. ನಗದು ಜಪ್ತಿ! ಐಟಿ ದಾಳಿಯ ಇದುವರೆಗಿನ ಗರಿಷ್ಠ ಮೊತ್ತ!

ನಗದು ಎಣಿಕೆ ಯಂತ್ರ

ಅಲ್ಲದೆ ಬಾಲಕೃಷ್ಣ ಅವರ ಮನೆಯಲ್ಲಿರುವ ನಗದು ಎಣಿಕೆ ಯಂತ್ರಗಳನ್ನೂ ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ನಿರಂತರ ಶೋಧದಿಂದ ಇನ್ನೂ ಹೆಚ್ಚಿನ ಆಸ್ತಿಗಳನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ. ʼʼಎಸಿಬಿ ಈಗ ಬಾಲಕೃಷ್ಣ ಅವರ ಬ್ಯಾಂಕ್ ಲಾಕರ್‌ಗಳು ಮತ್ತು ಇತರ ಅಘೋಷಿತ ಆಸ್ತಿಗಳ ಬಗ್ಗೆ ತನಿಖೆ ನಡೆಸುತ್ತಿದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬ್ಯಾಂಕ್ ಲಾಕರ್ ತೆರೆಯಲಿದೆʼʼ ಎಂದು ಮೂಲಗಳು ತಿಳಿಸಿವೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version