ನವ ದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಅವರ ಶಿರಚ್ಛೇದ ಮಾಡಿರುವ ಹಂತಕರಿಗೆ ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಸಂಪರ್ಕ ಇತ್ತು ಎಂದು ಮೂಲಗಳು ತಿಳಿಸಿವೆ.
ಕನ್ನಯ್ಯಲಾಲ್ ಶಿರಚ್ಛೇದ ಮಾಡಿದ ರಿಯಾಜ್ ಅಟ್ಟಾರಿ ೨೦೨೧ರಲ್ಲಿ ಮೂರು ಸಲ ಐಸಿಸ್ ಸಂಪರ್ಕಿಸಿದ್ದ. ಇದಕ್ಕಾಗಿ ಮುಜೀಬ್ ಅಬ್ಬಾಸಿ ಎಂಬಾತ ಸಹಕರಿಸಿದ್ದು, ಆತನನ್ನು ಇತ್ತೀಚೆಗೆ ಬಂಧಿಸಲಾಗಿತ್ತು.
ರಿಯಾಜ್ ತನ್ನ ಫೇಸ್‌ಬುಕ್ ಫೊಟೊಗಳಲ್ಲಿ ಐಸಿಸ್ ಉಗ್ರರಂತೆಯೇ ಕೈ ತೋರಿಸಿದ್ದ. ಕೆಲ ಸಂಘಟನೆಗಳು ಈ ದುಷ್ಕೃತ್ಯದ ಹಿಂದಿರುವ ಗುಮಾನಿ ಹಿನ್ನೆಲೆಯಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಉದಯ್‌ಪುರದ ಧನ್‌ಮಂಡಿ ಪ್ರದೇಶದಲ್ಲಿ ಟೈಲರ್ ಕನ್ನಯ್ಯ ಲಾಲ್ ಶಿರಚ್ಛೇದ ಮಾಡಿದ ಹಂತಕರು ಗಿರಾಕಿಗಳಂತೆ ಅವರ ಶಾಪ್‌ಗೆ ಬಂದಿದ್ದರು. “ನಾವು ಬಟ್ಟೆ ಹೊಲಿಸಬೇಕಾಗಿದೆʼʼ ಎಂದು ಇಬ್ಬರೂ ಹೇಳಿದ್ದರು. ಇವರಲ್ಲಿ ಒಬ್ಬಾತ ತನ್ನನ್ನು ರಿಯಾಜ್ ಎಂದು ಪರಿಚಯ ಮಾಡಿಕೊಂಡಿದ್ದ. ಆತನ ಅಳತೆಯನ್ನೂ ಟೈಲರ್ ಕನ್ನಯ್ಯ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.
ಇದಾದ ಕೆಲವೇ ಕ್ಷಣದಲ್ಲಿ ಒಬ್ಬಾತ ಹರಿತವಾದ ಚಾಕು ತೆಗೆದು ಕನ್ನಯ್ಯನ ಕುತ್ತಿಗೆ ಕುಯ್ಯುತ್ತಾನೆ. ಇದನ್ನು ಇನ್ನೊಬ್ಬ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೂ ಹಂತಕರು ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾಡಹಗಲೇ ಜನ ನಿಬಿಡ ಪ್ರದೇಶದಲ್ಲೇ ಇರುವ ತಮ್ಮ ಅಂಗಡಿಯಲ್ಲಿ ಟೈಲರ್ ಕನ್ನಯ್ಯ ಲಾಲ್ ಅವರ ಶಿರಚ್ಛೇದ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ. ಹಂತಕರು ಜಾಲತಾಣಗಳಲ್ಲಿ ಬಿಟ್ಟಿರುವ ವಿಡಿಯೊವನ್ನು ಶೇರ್ ಮಾಡದಂತೆ ಪೊಲೀಸರು ಜನತೆಗೆ ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಒಂದು ತಿಂಗಳು ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ೨೪ ಗಂಟೆ ಕಾಲ ಇಂಟರ್‌ನೆಟ್ ಬಂದ್ ಮಾಡಲಾಗಿದೆ.
ಕನ್ನಯ್ಯಲಾಲ್ ಅವರು ಬಿಜೆಪಿಯಿಂದ ಸಸ್ಪೆಂಡ್ ಆಗಿರುವ ನೂಪುರ್ ಶರ್ಮಾ ಪರ ೧೦ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಾದ ಕೆಲ ದಿನಗಳಲ್ಲೇ ಹಂತಕರು ಬರ್ಬರವಾಗಿ ಶಿರಚ್ಛೇದ ಮಾಡಿದ್ದಾರೆ. ಪರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ದೇಶದ ನಾನಾ ಕಡೆಗಳಲ್ಲಿ ನೂಪುರ್ ಶರ್ಮಾ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿತ್ತು.
ಕನ್ನಯ್ಯ ಲಾಲ್ ಅರೆಸ್ಟ್ ಆಗಿದ್ರು
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದ ಟೈಲರ್ ಕನ್ನಯ್ಯ ಲಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ವಿವಾದಕ್ಕೀಡಾಗಿತ್ತು. ಇದಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದ್ದರು. ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರು.
ಕನ್ನಯ್ಯ ಲಾಲ್‌ಗೆ ಜೀವ ಬೆದರಿಕೆ ಇತ್ತು
ನೂಪುರ್ ಶರ್ಮಾ ಪರ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅವರಿಗೆ ಜೀವ ಬೆದರಿಕೆಗಳೂ ಬಂದಿತ್ತು. ಈ ಬಗ್ಗೆ ಪೊಲೀಸ್ ಠಾಣೆಯನ್ನೂ ಸಂಪರ್ಕಿಸಿ ದೂರು ಕೊಟ್ಟಿದ್ದರು. ಆದರೆ ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಶಿರಚ್ಛೇದ ಪ್ರಕರಣ | ಭುಗಿಲೆದ್ದ ಪ್ರತಿಭಟನೆ; ಉದಯಪುರದಲ್ಲಿ ಇಂಟರ್‌ನೆಟ್ ಸ್ಥಗಿತ, ಕರ್ಫ್ಯೂ ಜಾರಿ