ಹೈದ್ರಾಬಾದ್, ತೆಲಂಗಾಣ: ತೆಲಂಗಾಣ ಲೋಕಸೇವಾ ಆಯೋಗ(TSPSC) ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯು (Question Paper Leak) ಮತ್ತೊಂದು ಕಾರಣಕ್ಕೆ ಕುಖ್ಯಾತವಾಗುತ್ತಿದೆ. ಅಭ್ಯರ್ಥಿಗಳು, ಕೃತಕ ಬುದ್ಧಿಮತ್ತೆ ಆಧರಿತ ಚಾಟ್‌ಜಿಪಿಟಿಯನ್ನು (ChatGPT) ಬಳಸಿಕೊಂಡು ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದ ದೇಶದ ಮೊದಲ ಪ್ರಕರಣ ಎಂಬ ಕಳಂಕ ಕೂಡ ಅಂಟಿದೆ.
ತೆಲಂಗಾಣ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು (SIT) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಮತ್ತು ವಿಭಾಗೀಯ ಖಾತೆಗಳ ಅಧಿಕಾರಿ (DAO) ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ, ಆರೋಪಿಯೊಬ್ಬರು ಪ್ರಶ್ನೆ ಪತ್ರಿಕೆ ಸಿಕ್ಕ ಕೂಡಲೇ ಉತ್ತರಗಳಿಗಾಗಿ ಇತ್ತೀಚಿನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿದ್ದಾರೆ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ನಂತರ ಅವರು ಪರೀಕ್ಷೆಗಳಿಗೆ ಉತ್ತರಿಸುವಾಗ ಬ್ಲೂಟೂತ್ ಇಯರ್‌ಬಡ್‌ಗಳನ್ನು ಬಳಸಿಕೊಂಡು ಆಕಾಂಕ್ಷಿಗಳಿಗೆ ಉತ್ತರಗಳನ್ನು ತಿಳಿಸಿದ್ದಾರೆಂದು ತಿಳಿದುಬಂದಿದೆ. ತೆಲಂಗಾಣ ಸ್ಟೇಟ್ ನಾರ್ದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿಯಲ್ಲಿ ವಿಭಾಗೀಯ ಎಂಜಿನಿಯರ್ ಆಗಿರುವ ಪೂಲಾ ರಮೇಶ್ (35) ಅವರನ್ನು ಪೆದ್ದಪಲ್ಲಿಯಲ್ಲಿ ಬಂಧಿಸಿ, ವಿಚಾಣೆಗೊಳಪಡಿಸಿದಾಗ ಎಸ್‌ಐಟಿಗೆ ಆಶ್ಚರ್ಯಕರ ವಿವರಗಳು ಗೊತ್ತಾಗಿವೆ.
ಕನಿಷ್ಠ ಮೂರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಈ ಪ್ರಶ್ನೆಗಳಿಗೆ ಉತ್ತರಗಳನ್ನು ರಮೇಶ್ ಅವರು ಚಾಟ್‌ಜಿಪಿಟಿಯನ್ನು ಬಳಸಿಕೊಂಡು ಉತ್ತರ ಕಂಡುಕೊಂಡಿದ್ದರು. ಜನವರಿ 22 ಮತ್ತು ಫೆಬ್ರವರಿ 26 ರಂದು ನಡೆಸಲಾದ ಎರಡು ಪರೀಕ್ಷೆಗಳಿಗೆ ಕುಳಿತುಕೊಳ್ಳುವ ಏಳು ಅಭ್ಯರ್ಥಿಗಳಿಗೆ ಉತ್ತರಗಳನ್ನು ನೀಡಲು ರಮೇಶ್ ಅವರು ವಿಸ್ತೃತ ಯೋಜನೆಯನ್ನು ರೂಪಿಸಿದ್ದರು. ಏಳೂ ಅಭ್ಯರ್ಥಿಗಳ ಕಿವಿಯಲ್ಲಿ ಬ್ಲೂಟೂತ್ ಮೈಕ್ರೋ ಇಯರ್‌ಪೀಸ್‌ಗಳನ್ನು ಅಳವಡಿಸಿದ್ದರು ಎಂಬ ಮಾಹಿತಿಯು ತನಿಖೆಯ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: Paper Leak: ಪ್ರಶ್ನೆ ಪತ್ರಿಕೆ ಸೋರಿಕೆ, ಗುಜರಾತ್ ಕಿರಿಯ ಗುಮಾಸ್ತ ಹುದ್ದೆ ಪರೀಕ್ಷೆ ರದ್ದು!
ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳನ್ನು ರಮೇಶ್ ಅವರು ಸುಮಾರು 30 ಅಭ್ಯರ್ಥಿಗಳಿಗೆ ಮಾರಾಟ ಮಾಡಿದ್ದರು. ಪ್ರತಿಯೊಬ್ಬರಿಂದಲೂ 25 ಲಕ್ಷದಿಂದ 30 ಲಕ್ಷ ರೂ.ವರೆಗೂ ಹಣ ಪಡೆದುಕೊಂಡಿದ್ದರು. ಒಟ್ಟು 35 ಅಭ್ಯರ್ಥಿಗಳಿಂದ ಸುಮಾರು 1 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ರಮೇಶ್ ಹಾಕಿಕೊಂಡಿದ್ದರು. ಈ ಹಗರಣ ಬೆಳಕಿಗೆ ಬರುವ ಹೊತ್ತಿಗೆ ರಮೇಶ್ ಸುಮಾರು 1.1 ಕೋಟಿ ರೂ. ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.