Site icon Vistara News

Yogi Adityanath: ನಿರಂತರ 6 ವರ್ಷ ಸಿಎಂ, ಯೋಗಿ ಹೊಸ ದಾಖಲೆ; ಬುಲ್ಡೋಜರ್​ ಬಾಬಾನಿಂದ ವಿಕಾಸ ಪುರುಷನವರೆಗೆ…

Achievements of Uttar Pradesh CM Yogi Adityanath in 6 years

#image_title

ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೆ ಏರುವ ಮೂಲಕ ದಾಖಲೆ ಸೃಷ್ಟಿಸಿರುವ ಯೋಗಿ ಆದಿತ್ಯನಾಥ್​ (Yogi Adityanath) ಕಳೆದ ವರ್ಷ ಇದೇ ದಿನ, ಅಂದರೆ 2022ನೇ ಇಸ್ವಿಯ ಮಾರ್ಚ್​ 25ರಂದು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅಲ್ಲಿನ ಅಟಲ್​ ಬಿಹಾರಿ ವಾಜಪೇಯಿ ಇಕಾನಾ ಸ್ಟೇಡಿಯಂನಲ್ಲಿ ನಡೆದಿದ್ದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ, ಅಮಿತ್​ ಶಾ, ಜೆಪಿ ನಡ್ಡಾ ಮತ್ತಿತರ ಗಣ್ಯರೂ ಪಾಲ್ಗೊಂಡಿದ್ದರು. ಹೀಗೆ ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಸಿಎಂ ಆಗಿ ಇಂದಿಗೆ (ಮಾರ್ಚ್​ 25) ಅವರು ಒಂದು ವರ್ಷ ಪೂರೈಸಿದ್ದಾರೆ. ಎರಡನೇ ಅವಧಿಯ ಯೋಗಿ ಆಡಳಿತದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ ಸಜ್ಜಾಗಿದೆ.

ಯೋಗಿ ಆದಿತ್ಯನಾಥ್​ ಅವರು ತಮ್ಮ ಮೊದಲನೇ ಅವಧಿಯಲ್ಲಿ ನಡೆಸಿದ ಆಡಳಿತವೇ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜ-ದೇಶ ವಿರೋಧಿ ಕೃತ್ಯಗಳನ್ನು ಹತ್ತಿಕ್ಕಲು ಅವರು ಜಾರಿಗೊಳಿಸಿದ ಕೆಲವು ಕ್ರಮಗಳನ್ನು ಬೇರೆ ರಾಜ್ಯಗಳ ಜನರೂ ಹೊಗಳುತ್ತಿದ್ದಾರೆ. ‘ಯೋಗಿ ಮಾದರಿ’ ಆಡಳಿತ ಎಂದೇ ಫೇಮಸ್​ ಆಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಈ ಹಿಂದೆ ಯೋಗಿ ಮಾದರಿ ಸರ್ಕಾರದ ಪ್ರಸ್ತಾಪ ಮಾಡಿದ್ದರು. ಕರ್ನಾಟಕದಲ್ಲೂ ಅದೇ ತರದ ಆಡಳಿತ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಹೀಗೆ ಮೊದಲನೇ ಅವಧಿಯಲ್ಲಿ ಕಾನೂನು-ಸುವ್ಯವಸ್ಥೆ, ಕ್ರೈಂಗಳ ಹತ್ತಿಕ್ಕಲು ಹೆಚ್ಚಿನ ಗಮನ ಹರಿಸಿದ್ದ ಯೋಗಿ ಆದಿತ್ಯನಾಥ್​, ಎರಡನೇ ಅವಧಿಯಲ್ಲಿ ‘ಹೂಡಿಕೆ’ ‘ಪ್ರವಾಸೋದ್ಯಮ ಅಭಿವೃದ್ಧಿ’ ಮತ್ತು ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದೀಗ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಸರ್ಕಾರ, ಈ ಒಂದು ವರ್ಷದಲ್ಲಿ ಏನೆಲ್ಲ ಆಯಿತು ಎಂಬುದನ್ನು ಹೈಲೈಟ್ ಮಾಡಿ ತೋರಿಸಲು ಮುಂದಾಗಿದೆ.

ಯೋಗಿ ಆದಿತ್ಯನಾಥ್​ರನ್ನು ನಾಯಕ ಎಂದು ಬಿಂಬಿಸಲು ಯೋಜನೆ
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್​ ಸದಾ ಸಿದ್ಧವಾಗಿರುತ್ತದೆ. ಯಾವುದೇ ಕೇಸ್​​ನಲ್ಲಿ ಅಪರಾಧಿ ಎನ್ನಿಸಿದವರ ಮನೆ, ಆಸ್ತಿ-ಪಾಸ್ತಿ ಧ್ವಂಸವಾಗುತ್ತದೆ. ಹೀಗಾಗಿ ಯೋಗಿ ಆದಿತ್ಯನಾಥ್​ರನ್ನು ಇಷ್ಟುದಿನ ಇಡೀ ದೇಶ ಬುಲ್ಡೋಜರ್ ಬಾಬಾ, ಡೆಮೋಲಿಶನ್​ ಮ್ಯಾನ್​ ಎಂಬಿತ್ಯಾದಿ ಹೆಸರಲ್ಲೆಲ್ಲ ಕರೆಯುತ್ತಿದೆ ಮತ್ತು ಅವರನ್ನು ಜನರು ಹಾಗೇ ನೋಡುತ್ತಿದ್ದಾರೆ. ಆದರೆ ಇಷ್ಟುದಿನ ಅವರಿಗಿದ್ದ ಈ ಬುಲ್ಡೋಜರ್ ಬಾಬಾ ಇಮೇಜ್​​ನ್ನು ತೊಡೆದು ಹಾಕಿ, ಅವರನ್ನೊಬ್ಬ ‘ ಪ್ರಭಾವಿ ನಾಯಕ’ ಎಂದು ಬಿಂಬಿಸಲು ಸಿದ್ಧತೆ ನಡೆಯುತ್ತಿದೆ. ಯೋಗಿ ಅವರ ಅಭಿವೃದ್ಧಿ ಮಾದರಿಯು ‘ನಂಬಿಕೆಗೆ ಕೊಟ್ಟ ಗೌರವ’ ಎಂಬ ಅಜೆಂಡಾದಡಿ ಹೆಣೆಯಲ್ಪಟ್ಟಿದ್ದು ಎಂದು ಜನತೆಗೆ ತೋರಿಸುವ, ಈ ಮೂಲಕ ‘ನಿಮ್ಮ ನಂಬಿಕೆಯನ್ನು ಯೋಗಿ ಆದಿತ್ಯನಾಥ್​ ಎಂದಿಗೂ ಹುಸಿ ಮಾಡುವುದಿಲ್ಲ, ಅಭಿವೃದ್ಧಿ ಕಾರ್ಯಕ್ಕೆ ಸದಾ ಬದ್ಧ’ ಎಂದು ಸಾರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಅಯೋಧ್ಯೆ ಅಭಿವೃದ್ಧಿಯಲ್ಲಿ ಸಿಂಹಪಾಲು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾನೂನು ತೊಡಕುಗಳೆಲ್ಲ ಮೀರಿ ಅಲ್ಲಿ ಶ್ರೀರಾಮನ ದೇಗುಲ ಚೆಂದವಾಗಿ ರೂಪುಗೊಳ್ಳುತ್ತಿದೆ. ಇದು ಕೇಂದ್ರ ಸರ್ಕಾರದ ವೈಯಕ್ತಿಕ ಆಸಕ್ತಿಯೂ ಹೌದು. ಆದರೆ ಅದರ ಅಭಿವೃದ್ಧಿಯಲ್ಲಿ ಸಿಂಹಪಾಲು ಯೋಗಿಯವರದ್ದು. 2024ರ ಲೋಕಸಭೆ ಚುನಾವಣೆಯೊಳಗೆ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಬೇಕು ಎಂಬುದು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಮುಖ್ಯ ಉದ್ದೇಶ. ಅದರಲ್ಲೂ ಯೋಗಿ ಆದಿತ್ಯನಾಥ್​ ಅವರು ಇಡೀ ಅಯೋಧ್ಯೆಯನ್ನೇ ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಹೀಗಾಗಿ ಖುದ್ದಾಗಿ ತಾವೇ ನಿಂತು ಅಯೋಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆಗಾಗ ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಅಯೋಧ್ಯೆಯನ್ನು ಮಾದರಿ ಸೌರ ನಗರ ಎಂದು ರೂಪಿಸುವಲ್ಲಿಂದ ಹಿಡಿದು, ಅಲ್ಲಿನ ರಸ್ತೆ ಅಗಲೀಕರಣ, ಹೊಸ ಬಸ್ ಸ್ಟೇಶನ್​, ಏರ್​ಪೋರ್ಟ್​ ನಿರ್ಮಾಣವೆಲ್ಲ ಕಾರ್ಯಸೂಚಿಯಲ್ಲಿ ಇದೆ. ಅವೆಲ್ಲವನ್ನೂ ನಿಗದಿತ ಸಮಯದೊಳಗೆ ಮುಗಿಸುವ ಧಾವಂತದಲ್ಲಿದ್ದಾರೆ ಯೋಗಿ ಆದಿತ್ಯನಾಥ್​. ಅಯೋಧ್ಯೆ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ದೇಶದ ಜನರಿಗೆ ತೋರಿಸುವ ಸಿದ್ಧತೆಯನ್ನು ಅಲ್ಲಿನ ಸರ್ಕಾರ ಮಾಡಿಕೊಂಡಿದೆ ಎನ್ನಲಾಗಿದೆ.

ಬರೀ ಅಯೋಧ್ಯೆಯಷ್ಟೇ ಅಲ್ಲ, ಇನ್ನಿತರ ಧಾರ್ಮಿಕ ಪ್ರದೇಶಗಳ ಅಭಿವೃದ್ಧಿಯನ್ನೂ ಉತ್ತರ ಪ್ರದೇಶ ಸರ್ಕಾರ ತನ್ನ ಎರಡನೇ ಅವಧಿ ಕಾರ್ಯಸೂಚಿಯಲ್ಲಿ ಸೇರಿಸಿಕೊಂಡಿದೆ. ಪ್ರಯಾಗ್​ರಾಜ್​​ನಲ್ಲಿ 2025ರಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಈಗಾಗಲೇ ಸಿದ್ಧತೆಯನ್ನು ಶುರು ಮಾಡಿಕೊಂಡಿದೆ. ಅದರೊಂದಿಗೆ ಸೀತಾಪುರದಲ್ಲಿ ನೈಮಿಶರಣ, ಯುಪಿ ಪಶ್ಚಿಮ ಭಾಗದಲ್ಲಿರುವ ಬ್ರಜ್​, ಪೂರ್ವದಲ್ಲಿರುವ ವಿಂದ್ಯಾ ಮತ್ತು ಚಿತ್ರಕೂಟ ಧಾಮಗಳ ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದೆ.

ಉತ್ತಮ ಪ್ರದೇಶದಿಂದ ನಿವೇಶ್​ ಪ್ರದೇಶದತ್ತ
ಆಗಲೇ ಹೇಳಿದಂತೆ ಉತ್ತರ ಪ್ರದೇಶ ಸರ್ಕಾರ ಮೊದಲ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆಯೇ ಹೆಚ್ಚಿನ ಗಮನಹರಿಸಿತ್ತು. ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ ರೂಪಿಸುವುದು ಮೊದಲ ಆದ್ಯತೆ ಎಂದು ಹೇಳಿತ್ತು. ಅದರಂತೆ ಮಾಡಿದೆ ಕೂಡ. ಈಗ ಎರಡನೇ ಅವಧಿಗೆ ಉತ್ತರ ಪ್ರದೇಶವನ್ನು ನಿವೇಶ್​ ಪ್ರದೇಶ (ಹೂಡಿಕೆ ಪ್ರದೇಶ)ವನ್ನಾಗಿ ಬದಲಿಸುವತ್ತ ಗಮನ ಹರಿಸಿದೆ. ಉತ್ತರ ಪ್ರದೇಶದಲ್ಲಿ ಹೂಡಿಕೆಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಇತ್ತೀಚೆಗೆ ಲಖನೌನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 35 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಹೂಡಿಕೆ ಪ್ರಸ್ತಾವನೆಯನ್ನು ಸ್ವೀಕರಿಸಿದ್ದಾಗಿ ಯುಪಿ ಗವರ್ನ್​ಮೆಂಟ್ ಹೇಳಿಕೊಂಡಿದೆ. ‘ಉತ್ತರ ಪ್ರದೇಶ, ರಾಷ್ಟ್ರರಾಜಧಾನಿ ಪ್ರದೇಶವನ್ನೂ ಮೀರಿ, ಬೇರೆ ಪ್ರದೇಶಗಳ ಹೂಡಿಕೆದಾರರನ್ನೂ ಸೆಳೆಯುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಎಂದು ತಿಳಿಸಿದೆ. ಅದರೊಂದಿಗೆ ಸೆಪ್ಟೆಂಬರ್​ ತಿಂಗಳಲ್ಲಿ ಐದು ದಿನಗಳ ಯುಪಿ ಅಂತಾರಾಷ್ಟ್ರೀಯ ವ್ಯಾಪಾರ -2023 (UP International Trade 2023) ಸಮಾವೇಶ ನಡೆಸಲೂ ಸಿದ್ಧತೆಗಳು ಪ್ರಾರಂಭವಾಗಿವೆ.

ಇದನ್ನೂ ಓದಿ: Best Chief Minister | ಈ ಬಾರಿಯೂ ಯೋಗಿ ಆದಿತ್ಯನಾಥ್‌ ದೇಶದ ಬೆಸ್ಟ್‌ ಸಿಎಂ, ನಂತರದ ಸ್ಥಾನ ಯಾರಿಗೆ?

ಒಟ್ಟಾರೆ ಈ ಎರಡನೇ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ, ಕೃಷಿ ಉತ್ಪನ್ನ, ಸಾಮಾಜಿಕ ಭದ್ರತೆ, ಮೂಲ ಸೌಕರ್ಯ ಮತ್ತು ಉದ್ಯಮ, ನಗರ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ವೈದ್ಯಕೀಯ ಮತ್ತು ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸಾಂಸ್ಕೃತಿಕ, ಆದಾಯ ಸಂಗ್ರಹ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಅಭಿವೃದ್ಧಿ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಡಿ ಇಡುತ್ತಿದ್ದು, ಇದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೇ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಯೋಗಿ ಆಯ್ಕೆಯೇ ಒಂದು ಅಚ್ಚರಿಯಾಗಿತ್ತು
ಉತ್ತರ ಪ್ರದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲ್ಲಿನ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್​ ಅವರನ್ನು ಆಯ್ಕೆ ಮಾಡಿದ್ದೇ ಬಹುದೊಡ್ಡ ಅಚ್ಚರಿಯಾಗಿತ್ತು. ಗೋರಖ್​ನಾಥ್ ಪೀಠದ ಮುಖ್ಯಸ್ಥ, ಸನ್ಯಾನಿ ರಾಜ್ಯಾಭಾರ ಮಾಡುತ್ತಾನಾ? ಎಂದು ವ್ಯಂಗ್ಯವಾಡಿದವರೂ ಅನೇಕರು. ಆದರೆ ಬರುಬರುತ್ತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ಯೋಗಿ, ಉತ್ತರ ಪ್ರದೇಶದಲ್ಲಿ ಇದುವರೆಗೆ ಅತ್ಯಂತ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1954ರಿಂದ 1960ರವರೆಗೆ ಒಟ್ಟು 5ವರ್ಷ 345 ದಿನಗಳ ಕಾಲ ಕಾಂಗ್ರೆಸ್​​ನ ಡಾ. ಸಂಪೂರ್ಣಾನಂದ ಅವರು ಸಿಎಂ ಆಗಿ ಆಡಳಿತ ನಡೆಸಿದ್ದರು. ಅವರ ದಾಖಲೆಯನ್ನು ಆದಿತ್ಯನಾಥ್ ಮುರಿದಿದ್ದಾರೆ. 2023ರ ಮಾರ್ಚ 1ರ ಲೆಕ್ಕಾಚಾರದಂತೆ ಯೋಗಿಯವರು ಐದು ವರ್ಷ, 346 ದಿನಗಳ ಕಾಲ ಸಿಎಂ ಆಗಿ ಆಡಳಿತ ಮಾಡಿದ್ದಾರೆ ಮತ್ತು ಅವರ ಆಡಳಿತ ಮುಂದುವರಿದಿದೆ.

2017ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಿಎಂ ಯೋಗಿ ಆದಿತ್ಯನಾಥ್ ಅವರು ಹಿಂದು ತ್ವ ಸ್ಥಾಪನೆ, ಕ್ರೈಂ/ಮಾಫಿಯಾ, ಸಂಘಟಿತ ಅಪರಾಧಗಳಿಗೆ ಕಡಿವಾಣ ಹಾಕುವಲ್ಲಿ ಅತ್ಯಂತ ಹೆಚ್ಚು ಶ್ರಮಿಸಿದ್ದಾರೆ. ಗೋಹತ್ಯೆ ನಿಷೇಧ, ಅಕ್ರಮ ಕಸಾಯಿ ಖಾನೆಗಳ ಮುಚ್ಚುವಿಕೆಯಂಥ ನಿರ್ಧಾರಗಳನ್ನು ಅಧಿಕಾರ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಅವರು ಜಾರಿಗೊಳಿಸಿದ್ದಾರೆ. ಅವರ ಈ ಆಡಳಿತವೇ ಅವರಿಗೆ ಅಪಾರ ಸಂಖ್ಯೆಯ ಅನುಯಾಯಿಗಳನ್ನು ತಂದುಕೊಟ್ಟಿದೆ.

ಯುವಜನರ ಮೇಲೆ ಫೋಕಸ್​
ಉತ್ತರ ಪ್ರದೇಶದಲ್ಲಿ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಲ್ಲಿನ ಪ್ರತಿಪಕ್ಷಗಳು ಒಂದೇ ಸಮನೆ ಆರೋಪ ಮಾಡುತ್ತಿವೆ. ಅದರ ಬೆನ್ನಲ್ಲೇ ಯೋಗಿ ಸರ್ಕಾರ ಯುವಜನರ ಮೇಲೆ ಹೆಚ್ಚಿನ ಫೋಕಸ್​ ಮಾಡುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳುತ್ತಿದೆ. ಕ್ರೀಡೆ, ಕೌಶಲಾಭಿವೃದ್ಧಿ, ಹಳ್ಳಿಗಳ ಮಟ್ಟದಲ್ಲಿ ವ್ಯಾಯಾಮ ಶಾಲೆಗಳನ್ನು ತೆರೆಯಲು ಉತ್ತೇಜಿಸುತ್ತಿದೆ.

ಸದ್ಯ ಉತ್ತರ ಪ್ರದೇಶವನ್ನು ಒಂದು ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಅವರ ಪ್ರಯತ್ನ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಕಾನೂನು ಸುವ್ಯವಸ್ಥೆ ಸುಧಾರಿಸಿದೆ, ಪ್ರವಾಸಿ ತಾಣಗಳ ಅಭಿವೃದ್ಧಿಯೂ ಶರವೇಗದಿಂದ ಆಗುತ್ತಿದ್ದು, ಹೂಡಿಕೆ ಕ್ಷೇತ್ರದಲ್ಲೂ ದಾಪುಗಾಲು ಹಾಕುತ್ತಿದೆ. ಉತ್ತರ ಪ್ರದೇಶ ಹೂಡಿಕೆಗೆ ಯೋಗ್ಯವಲ್ಲ ಎಂಬ ಮಾತನ್ನು ಸುಳ್ಳು ಮಾಡಲು ಯೋಗಿ ಆದಿತ್ಯನಾಥ್ ಪಣತೊಟ್ಟು ಅದರಂತೆ ರೂಪುರೇಷೆಗಳನ್ನು ಹೆಣೆಯುತ್ತಿದ್ದಾರೆ. ಆರು ವರ್ಷಗಳಲ್ಲಿ ಮಾಡಿದ ಈ ಸಾಧನೆಗಳನ್ನೆಲ್ಲ ಜನರ ಮುಂದಿಡಲು ಅಲ್ಲಿನ ಸರ್ಕಾರ ಪ್ಲ್ಯಾನ್ ಮಾಡಿದೆ.

Exit mobile version