ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಜನವರಿ 1 ಹಾಗೂ 2ರಂದು ನಡೆದ ಉಗ್ರರ ದಾಳಿಯಲ್ಲಿ ಹತ್ಯೆಗೀಡಾದ ಏಳು ಹಿಂದುಗಳ ಕುಟುಂಬಸ್ಥರನ್ನು ಭೇಟಿಯಾಗಲು ಕಣಿವೆಗೆ ತೆರಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah In Jammu), ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. “ಕಣಿವೆಯ ಭದ್ರತೆಗೆ ಯೋಜನೆ ರೂಪಿಸಲಾಗಿದೆ. ಭದ್ರತೆ ಒದಗಿಸಲು ನಾವು ಬದ್ಧ” ಎಂದು ಹೇಳಿದ್ದಾರೆ.
ಜಮ್ಮುವಿನಲ್ಲಿ ಭದ್ರತೆ ದೃಷ್ಟಿಯಿಂದ ಉನ್ನತ ಮಟ್ಟದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, “ಉಗ್ರರು ಹಾಗೂ ಉಗ್ರ ಸಂಘಟನೆಗಳ ಉದ್ದೇಶ ಏನೇ ಆಗಿರಲಿ. ಆದರೆ, ಜಮ್ಮು-ಕಾಶ್ಮೀರದ ಭದ್ರತೆ ವಿಷಯದಲ್ಲಿ ಯಾವುದೇ ಮುಲಾಜಿಲ್ಲ. ಉಗ್ರರನ್ನು ನಿಗ್ರಹಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೋ, ಅವೆಲ್ಲವನ್ನೂ ತೆಗೆದುಕೊಳ್ಳುವಂತೆ ಸೇನೆ ಹಾಗೂ ಪೊಲೀಸರಿಗೆ ಸೂಚಿಸಲಾಗಿದೆ. ಕಣಿವೆಯಿಂದ ಉಗ್ರರನ್ನು ನಿರ್ಮೂಲನೆ ಮಾಡುವುದು ನಿಶ್ಚಿತ” ಎಂದು ತಿಳಿಸಿದರು.
ದೂರವಾಣಿ ಮೂಲಕವೇ ಕುಟುಂಬಸ್ಥರಿಗೆ ಸಮಾಧಾನ
ರಾಜೌರಿಯಲ್ಲಿ ಹಿಂದುಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಹತರಾದ ಏಳು ಜನರ ಕುಟುಂಬಸ್ಥರನ್ನು ಭೇಟಿಯಾಗಲು ಅಮಿತ್ ಶಾ ಅವರಿಗೆ ಸಾಧ್ಯವಾಗಲಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಅವರು ರಾಜೌರಿಯ ಧಾಂಗ್ರಿ ಗ್ರಾಮಕ್ಕೆ ತೆರಳಲು ಸಾಧ್ಯವಾಗಲಿಲ್ಲ. “ಹವಾಮಾನ ವೈಪರೀತ್ಯದಿಂದಾಗಿ ಕುಟುಂಬಸ್ಥರನ್ನು ಭೇಟಿಯಾಗಲು ಆಗಲಿಲ್ಲ. ಆದರೆ, ದೂರವಾಣಿ ಮೂಲಕ ಸಂತ್ರಸ್ತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ” ಎಂದು ಮಾಹಿತಿ ನೀಡಿದರು.
ರಾಜೌರಿ ದಾಳಿ ಕುರಿತು ಎನ್‌ಐಎ ತನಿಖೆ
“ರಾಜೌರಿಯಲ್ಲಿ ನಡೆದ ಉಗ್ರರ ದಾಳಿಯ ತನಿಖೆಯನ್ನು ಎನ್‌ಐಗೆ ವಹಿಸಲಾಗಿದೆ. ಪ್ರಕರಣವನ್ನು ತನಿಖೆ ನಡೆಸಿ, ಉಗ್ರರನ್ನು ಸದೆಬಡಿಯುವುದೇ ಬಿಡುವುದಿಲ್ಲ. ಮೂರು ತಿಂಗಳಲ್ಲಿ ಕಣಿವೆಯ ಭದ್ರತೆಗೆ ಹೊಸ ರೂಪ ನೀಡಲಾಗುತ್ತದೆ” ಎಂದು ವಿವರಿಸಿದರು.
ಇದನ್ನೂ ಓದಿ | Rajouri Terror Attack | ರಾಜೌರಿಯಲ್ಲಿ ದಾಳಿ ನಡೆಸಿದ್ದ ಇಬ್ಬರು ಉಗ್ರರ ಹತ್ಯೆ; ಮೃತ ನಾಗರಿಕರ ಸಂಖ್ಯೆ 7ಕ್ಕೆ ಏರಿಕೆ