ಮುಂಬೈ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ನಟ, ನಟಿಯರು, ಸಮಾಜ ಸೇವಕರು ಸೇರಿ ಹಲವರನ್ನು ಕಣಕ್ಕೆ ಇಳಿಸುತ್ತಿವೆ. ಇದರ ಬೆನ್ನಲ್ಲೇ, ಬಾಲಿವುಡ್ ನಟ ಗೋವಿಂದ (Actor Govinda) ಅವರು ಶಿವಸೇನೆ (ಏಕನಾಥ್ ಶಿಂಧೆ) (Shiv Sena) ನಾಯಕರೊಬ್ಬರನ್ನು ಭೇಟಿಯಾಗಿದ್ದು, ಮುಂಬೈ ವಾಯವ್ಯ ಕ್ಷೇತ್ರದಿಂದ (North West Mumbai) ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾರ್ಚ್ ತಿಂಗಳ ಆರಂಭದಲ್ಲಿ ನಟ ಗೋವಿಂದ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕವೇ, ನಟ ಗೋವಿಂದ ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಮತ್ತೆ ಶಿವಸೇನೆ ನಾಯಕರೊಬ್ಬರನ್ನು ಗೋವಿಂದ ಅವರು ಭೇಟಿಯಾಗಿದ್ದು, ವದಂತಿಗಳ ತೀವ್ರತೆ ಇನ್ನೂ ಜಾಸ್ತಿಯಾಗಿದೆ. ಆದಾಗ್ಯೂ, ಸ್ಪರ್ಧೆ ಕುರಿತು ಗೋವಿಂದ ಅವರಾಗಲಿ, ಶಿವಸೇನೆಯಾಗಿ ಇದುವರೆಗೆ ಯಾವುದೇ ಘೋಷಣೆ ಮಾಡಿಲ್ಲ.
Actor #Govinda to join #Maharashtra chief minister #EknathShinde's #ShivSena, to contest from the Mumbai North West constituency against Amol Kirtikar of the #ShivSenaUBT led by #UddhavThackeray. Govinda emerged as a giant killer of sorts by defeating then petroleum minister Ram…
— Dhaval Kulkarni (धवल कुलकर्णी) 🇮🇳 (@dhavalkulkarni) March 28, 2024
ಮೂಲಗಳ ಪ್ರಕಾರ, ನಟ ಗೋವಿಂದ ಅವರು ಜುಹುವಿನಲ್ಲಿ ಶಿವಸೇನೆ ನಾಯಕ ಕೃಷ್ಣ ಹೆಗಡೆ ಅವರನ್ನು ಭೇಟಿಯಾಗಿ, ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?
ನಟ ಗೋವಿಂದಗೆ ಇದು 2ನೇ ಇನ್ನಿಂಗ್ಸ್
ಹೀರೋ ನಂಬರ್ 1 ಖ್ಯಾತಿಯ ನಟ ಗೋವಿಂದ ಅವರು ಮತ್ತೆ ಚುನಾವಣಾ ರಾಜಕೀಯಕ್ಕೆ ಇಳಿದರೆ, ಇದು ಅವರಿಗೆ ಎರಡನೇ ಇನ್ನಿಂಗ್ಸ್ ಆಗಲಿದೆ. ಗೋವಿಂದ ಅವರು 2004ರಲ್ಲಿ ಮುಂಬೈ ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ, ಬಿಜೆಪಿಯ ರಾಮ್ ನಾಯಕ್ ಅವರನ್ನು ಗೋವಿಂದ ಸೋಲಿಸಿದ್ದರು. ಆದರೆ, ಕಾರಣಾಂತರಗಳಿಂದ ಗೋವಿಂದ ಅವರು ಬಳಿಕ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಈಗ ಶಿವಸೇನೆ ಮೂಲಕ ಅವರು ಮತ್ತೆ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ನಸೀಬ್, ಹೀರೋ ನಂಬರ್ 1, ಪಾರ್ಟ್‌ನರ್, ರಾಜು ಬಾಬು, ಕೂಲಿ ನಂಬರ್ 1, ಧುಲೆ ರಾಜ ಸೇರಿ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ