Site icon Vistara News

Madhuri Dixit: ಟಿಮ್‌ ಕುಕ್‌ಗೆ ವಡಾ ಪಾವ್‌ ಟ್ರೀಟ್‌ ಕೊಡಿಸಿದ ಮಾಧುರಿ ದೀಕ್ಷಿತ್‌, ಅದ್ಭುತ ರುಚಿ ಎಂದ ಆ್ಯಪಲ್‌ ಸಿಇಒ

Actor Madhuri Dixit Treats Tim Cook To Vada Pav, Apple CEO Reacts

Actor Madhuri Dixit Treats Tim Cook To Vada Pav, Apple CEO Reacts

ಮುಂಬೈ: ವಡಾ ಪಾವ್‌ ಎಂದರೆ, ಅದರಲ್ಲೂ ಮುಂಬೈ ವಡಾ ಪಾವ್‌ ಎಂದರೆ ಬಾಯಲ್ಲಿ ನೀರೂರುತ್ತದೆ. ಮುಂಬೈನ ಸಾಮಾನ್ಯ ಜನರಿಂದ ಹಿಡಿದು ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌, ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ವರೆಗೆ ಬಹುತೇಕ ಜನರಿಗೆ ವಡಾ ಪಾವ್‌ ಎಂದರೆ ಪಂಚ ಪ್ರಾಣ. ಮುಂಬೈನಲ್ಲಿ ವಡಾ ಪಾವ್‌ ಮಹಿಮೆ ಈಗಿರುವ ಬೆನ್ನಲ್ಲೇ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ (Madhuri Dixit) ಅವರು ಆ್ಯಪಲ್‌ ಸಿಇಒ ಟಿಮ್‌ ಕುಕ್‌ ಅವರಿಗೆ ಮುಂಬೈನಲ್ಲಿ ವಡಾ ಪಾವ್‌ ಟ್ರೀಟ್‌ ಕೊಡಿಸಿದ್ದಾರೆ.

ಮಾಧುರಿ ದೀಕ್ಷಿತ್‌ ಅವರು ಟಿಮ್‌ ಕುಕ್‌ ಜತೆ ವಡಾ ಪಾವ್‌ ತಿನ್ನುತ್ತಿರುವ ಫೋಟೊ ಟ್ವೀಟ್‌ ಮಾಡಿದ್ದಾರೆ. “ಮುಂಬೈಗೆ ಆಗಮಿಸುವವರಿಗೆ ವಡಾ ಪಾವ್‌ ತಿನ್ನಿಸುವುದಕ್ಕಿಂತ ಬೇರೆ ಯಾವ ರೀತಿಯೂ ಸ್ವಾಗತ ಕೋರಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಇನ್ನು ಮಾಧುರಿ ದೀಕ್ಷಿತ್‌ ಫೋಟೊಗೆ ಪ್ರತಿಕ್ರಿಯಿಸಿದ ಟಿಮ್‌ ಕುಕ್‌, “ಇದೇ ಮೊದಲ ಬಾರಿಗೆ ನನಗೆ ವಡಾ ಪಾವ್‌ಅನ್ನು ಪರಿಚಯಿಸಿದ ಮಾಧುರಿ ದೀಕ್ಷಿತ್‌ ಅವರಿಗೆ ಧನ್ಯವಾದಗಳು. ವಡಾ ಪಾವ್‌ ರುಚಿಕಟ್ಟಾಗಿತ್ತು” ಎಂದು ಹೇಳಿದ್ದಾರೆ. ಫೋಟೊ ಈಗ ವೈರಲ್‌ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.

ವಡಾ ಪಾವ್‌ ಸವಿದ ದೀಕ್ಷಿತ್-ಕುಕ್

ಮುಂಬೈನಲ್ಲಿ ಟಿಮ್‌ ಕುಕ್‌

ಭಾರತದಲ್ಲಿ ಇದೇ ಮೊದಲ ಬಾರಿಗೆ ಆರಂಭಿಸಲಾಗತ್ತಿರುವ ಆ್ಯಪಲ್‌ ಸ್ಟೋರ್‌ಗೆ ಚಾಲನೆ ನೀಡಲು ಟಿಮ್‌ ಕುಕ್‌ ಅವರು ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (BKC) ಏಪ್ರಿಲ್‌ 18ರಂದು ದೇಶದ ಮೊದಲ ಆ್ಯಪಲ್‌ ಸ್ಟೋರ್‌ಗೆ ಟಿಮ್‌ ಕುಕ್‌ ಚಾಲನೆ ನೀಡಲಿದ್ದಾರೆ. ಇನ್ನು ದೇಶದ ಎರಡನೇ ಸ್ಟೋರ್‌ಅನ್ನು ಕುಕ್‌ ಅವರು ದೆಹಲಿಯಲ್ಲಿ ಉದ್ಘಾಟಿಸಲಿದ್ದಾರೆ. ಭಾರತಕ್ಕೆ ಆ್ಯಪಲ್‌ ಕಂಪನಿ ಪ್ರವೇಶಿಸಿ 25 ವರ್ಷವಾಗಿದ್ದು, ಇದರ ಸಂಭ್ರಮದಲ್ಲೂ ಟಿಮ್‌ ಕುಕ್‌ ಭಾಗಿಯಾಗುತ್ತಿದ್ದಾರೆ.

ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದಿದ್ದ ಸ್ಟಾರ್‌ಬಕ್ಸ್‌ ಸಹ ಸಂಸ್ಥಾಪಕ

ಭಾರತವು ಪ್ರತಿಯೊಂದರಲ್ಲೂ ವೈವಿಧ್ಯತೆ ಹೊಂದಿರುವಂತೆ ಆಹಾರದಲ್ಲೂ ವೈವಿಧ್ಯತೆ ಹೊಂದಿದೆ. ಹಾಗಾಗಿ, ವಿದೇಶದಿಂದ ಬರುವ ಗಣ್ಯರು, ಪ್ರವಾಸಿಗರು ಭಾರತದ ಆಹಾರ ಪದ್ಧತಿಯನ್ನು, ವಿವಿಧ ಬಗೆಯ ತಿಂಡಿಗಳನ್ನು ಇಷ್ಟಪಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ ವರ್ಷದ ನವೆಂಬರ್‌ನಲ್ಲಿ ವಿಶ್ವವಿಖ್ಯಾತ ಕಾಫಿ ಬ್ರ್ಯಾಂಡ್‌ ಸ್ಟಾರ್‌ಬಕ್ಸ್‌ನ ಸಹಸ್ಥಾಪಕ ಝೇವ್‌ ಸೀಗೆಲ್‌ ಅವರು ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಅಚ್ಚರಿಯ ಭೇಟಿ ನೀಡಿ ಅಲ್ಲಿನ ಮಸಾಲೆ ದೋಸೆ ಹಾಗೂ ಫಿಲ್ಟರ್‌ ಕಾಫಿ ಸವಿದಿದ್ದರು.

ಸೀಗೆಲ್‌ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿ ಭವನಕ್ಕೂ ತೆರಳಿದ್ದರು. ಈ ಕುರಿತ ಫೋಟೊ ಹಾಗೂ ವಿವರಗಳನ್ನು ವಿದ್ಯಾರ್ಥಿ ಭವನ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ʼʼಸೀಗೆಲ್‌ ಅವರನ್ನು ಗ್ರಾಹಕನಾಗಿ ಹೊಂದುವುದಕ್ಕೆ ಹೆಮ್ಮೆ ಹಾಗೂ ಸಂತೋಷ ಪಡುತ್ತೇವೆ. ಅವರು ನಮ್ಮ ಮಸಾಲೆ ದೋಸೆ ಹಾಗೂ ಕಾಫಿ ಸವಿದು, ಅದರ ಬಗ್ಗೆ ವಿಸಿಟರ್ಸ್‌ ಬುಕ್‌ನಲ್ಲಿ ಅನುಭವ ದಾಖಲಿಸಿದ್ದಾರೆʼʼ ಎಂದು ಟ್ವೀಟ್‌ ಮಾಡಿತ್ತು.

ಇದನ್ನೂ ಓದಿ: Madhuri Dixit: ʻಏಕ್ ದೋ ತೀನ್‌ʼ ಹಾಡಿಗೆ ಸ್ಟೆಪ್ಸ್‌ ಹಾಕಿದ ಮಾಧುರಿ ದೀಕ್ಷಿತ್: ವಿಡಿಯೊ ವೈರಲ್!

Exit mobile version