Site icon Vistara News

Nushrratt Bharuccha: ಇಸ್ರೇಲ್‌ನಲ್ಲಿ ಸಿಲುಕಿದ್ದ ನಟಿ ನುಶ್ರತ್‌ ಭರುಚ್ಚಾ ಸೇಫ್‌; ಅಭಿಮಾನಿಗಳು ಖುಷ್‌

Nushrratt Bharuccha

Actor Nushrratt Bharuccha reaches Israel airport, Back to India soon

ಜೆರುಸಲೇಂ: ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ (Israel Palestine War) ಹಮಾಸ್‌ ಉಗ್ರರು ದಾಳಿ ನಡೆಸಿದ್ದು, ಇಸ್ರೇಲ್‌ ಕೂಡ ಯುದ್ಧ ಸಾರಿದೆ. ಹಮಾಸ್‌ ಉಗ್ರರ ದಾಳಿ ಹಾಗೂ ಇಸ್ರೇಲ್‌ ಸೇನೆಯ ಪ್ರತಿದಾಳಿಯಿಂದಾಗಿ ಒಟ್ಟು 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಟೆಲ್‌ಅವಿವ್‌ ನಗರವಂತೂ ಅಕ್ಷರಶಃ ಮಸಣದಂತಾಗಿದೆ. ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ನಾಪತ್ತೆಯಾಗಿದ್ದ ಬಾಲಿವುಡ್‌ ನಟಿ ನುಶ್ರತ್‌ ಭರುಚ್ಚಾ (Nushrratt Bharuccha) ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

“ನುಶ್ರತ್‌ ಭರುಚ್ಚಾ ಇಸ್ರೇಲ್‌ನಲ್ಲಿ ಸುರಕ್ಷಿತವಾಗಿದ್ದಾಳೆ. ಅವಳ ಜತೆ ಮಾತನಾಡಿದ್ದೇನೆ. ಟೆಲ್‌ಅವಿವ್‌ನಿಂದ ಅವಳು ಮುಂಬೈಗೆ ಆಗಮಿಸಲಿದ್ದಾಳೆ. ಅವಳು ಸುರಕ್ಷಿತವಾಗಿರುವುದು ಸಮಾಧಾನ ತಂದಿದೆ. ಟೆಲ್‌ಅವಿವ್‌ನಿಂದ ದುಬೈಗೆ ತೆರಳಿ, ಅಲ್ಲಿಂದ ಮುಂಬೈಗೆ ಆಗಮಿಸಲಿದ್ದಾಳೆ” ಎಂದು ನುಶ್ರತ್‌ ಭರುಚ್ಚಾ ಅವರ ತಾಯಿ ತಸ್ನೀಮ್‌ ಭರುಚ್ಚಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರಿಂದ ನುಶ್ರತ್‌ ಭರುಚ್ಚಾ ಅಭಿಮಾನಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ.

ಇಸ್ರೇಲ್‌ನಲ್ಲಿ ನಟಿಗೆ ಏನಾಗಿತ್ತು?

ಇಸ್ರೇಲ್‌ನಲ್ಲಿ ಶನಿವಾರ (ಅಕ್ಟೋಬರ್‌ 7) ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ ನಟಿ ನುಶ್ರತ್‌ ಭರುಚ್ಚಾ ಅವರು ಮೊಬೈಲ್‌ ಸಂಪರ್ಕ ಕಳೆದುಕೊಂಡಿದ್ದರು. “ನುಶ್ರತ್‌ ಭರುಚ್ಚಾ ಅವರು ಹೈಫಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಿದ್ದರು. ಶನಿವಾರ ಮಧ್ಯಾಹ್ನ 12.30ಕ್ಕೆ ನಾವು ಅವರ ಜತೆ ಮಾತನಾಡಿದ್ದೆವು. ಆದರೆ, ಉಗ್ರರ ದಾಳಿಯ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಫೋನ್‌ಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಅವರು ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನಿಸುತ್ತಿದೆ. ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಯತ್ನಿಸಲಾಗುತ್ತಿದೆ” ಎಂದು ನಟಿಯ ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದರು. ನುಸ್ರತ್‌ ಭರುಚ್ಚಾ ಅವರು ಡ್ರೀಮ್‌ ಗರ್ಲ್‌, ಅಕೇಲಿ, ಸೆಲ್ಫಿ, ಜನ್‌ ಹಿತ್‌ ಮೇ ಜಾರಿ ಸೇರಿ ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Israel Palestine War: ಹಮಾಸ್‌ ದಾಳಿಗೆ 300 ಸಾವು; ಇಸ್ರೇಲ್‌ನಲ್ಲಿ ಭಾರತದ ವಿದ್ಯಾರ್ಥಿಗಳು ಅತಂತ್ರ!

ಇಸ್ರೇಲ್‌ ಪ್ರತಿದಾಳಿಗೆ 232 ಜನ ಸಾವು

ಮತ್ತೊಂದೆಡೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಕೂಡ ವಾಯುದಾಳಿ ನಡೆಸಿದೆ. ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ 232ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟರೆ, 1,600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಸ್ರೇಲ್‌ ದಾಳಿಗೆ ಹಮಾಸ್‌ ಉಗ್ರರ ಮೂರು ನೆಲೆಗಳು ಧ್ವಂಸಗೊಂಡಿವೆ. ಅವರ ಬೃಹತ್‌ ಕಟ್ಟಡಗಳು ಧರೆಗುರುಳಿವೆ. ಪ್ಯಾಲೆಸ್ತೀನ್‌ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್‌, ಇನ್ನೂ ಭೀಕರ ದಾಳಿಯ ಮೂಲಕ ವೈರಿಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದು ತಿಳಿದುಬಂದಿದೆ.

Exit mobile version