ಜೆರುಸಲೇಂ: ಯಹೂದಿಗಳ ದೇಶವಾದ ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ (Israel Palestine War) ಹಮಾಸ್ ಉಗ್ರರು ದಾಳಿ ನಡೆಸಿದ್ದು, ಇಸ್ರೇಲ್ ಕೂಡ ಯುದ್ಧ ಸಾರಿದೆ. ಹಮಾಸ್ ಉಗ್ರರು ನಡೆಸಿದ 5 ಸಾವಿರಕ್ಕೂ ಅಧಿಕ ರಾಕೆಟ್‌ಗಳ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಇದುವರೆಗೆ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಟೆಲ್‌ಅವಿವ್ ನಗರವಂತೂ ಅಕ್ಷರಶಃ ಮಸಣದಂತಾಗಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟಿ ನುಶ್ರತ್ ಭರುಚ್ಚಾ (Nushrratt Bharuccha) ಅವರು ಇಸ್ರೇಲ್‌ನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
“ನುಶ್ರತ್ ಭರುಚ್ಚಾ ಅವರು ಹೈಫಾ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಿದ್ದರು. ಶನಿವಾರ ಮಧ್ಯಾಹ್ನ 12.30ಕ್ಕೆ ನಾವು ಅವರ ಜತೆ ಮಾತನಾಡಿದ್ದೆವು. ಆದರೆ, ಉಗ್ರರ ದಾಳಿಯ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಫೋನ್‌ಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಅವರು ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನಿಸುತ್ತಿದೆ. ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಯತ್ನಿಸಲಾಗುತ್ತಿದೆ” ಎಂದು ನಟಿಯ ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ನುಸ್ರತ್ ಭರುಚ್ಚಾ ಅವರು ಡ್ರೀಮ್ ಗರ್ಲ್, ಅಕೇಲಿ, ಸೆಲ್ಫಿ, ಜನ್ ಹಿತ್ ಮೇ ಜಾರಿ ಸೇರಿ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Israel Palestine War: ಸೇರಿಗೆ ಸವ್ವಾಸೇರು; ಗಾಜಾದಲ್ಲಿ 200 ಜನರನ್ನು ಕೊಂದ ಇಸ್ರೇಲ್ ಸೇನೆ
ಮತ್ತೊಂದೆಡೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಕೂಡ ವಾಯುದಾಳಿ ನಡೆಸಿದೆ. ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟರೆ, 1,600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಸ್ರೇಲ್ ದಾಳಿಗೆ ಹಮಾಸ್ ಉಗ್ರರ ಮೂರು ನೆಲೆಗಳು ಧ್ವಂಸಗೊಂಡಿವೆ. ಅವರ ಬೃಹತ್ ಕಟ್ಟಡಗಳು ಧರೆಗುರುಳಿವೆ. ಪ್ಯಾಲೆಸ್ತೀನ್ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್, ಇನ್ನೂ ಭೀಕರ ದಾಳಿಯ ಮೂಲಕ ವೈರಿಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದು ತಿಳಿದುಬಂದಿದೆ.
ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ
ಇಸ್ರೇಲ್‌ನ ಟೆಲ್‌ಅವಿವ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ವಿಮಾನಗಳ ಹಾರಾಟ ರದ್ದುಗೊಳಿಸಿದೆ. “ಟೆಲ್ ಅವಿವ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಶನಿವಾರ (ಅಕ್ಟೋಬರ್ 7) ದೆಹಲಿಯಿಂದ ಟೆಲ್‌ಅವಿವ್‌ಗೆ ತೆರಳಬೇಕಿದ್ದ ಎಐ 139 ವಿಮಾನ ಹಾಗೂ ಟೆಲ್‌ಅವಿವ್‌ನಿಂದ ದೆಹಲಿಗೆ ಆಗಮಿಸಬೇಕಿದ್ದ ಎಐ 140 ವಿಮಾನದ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಮಾನಗಳ ಹಾರಾಟ ರದ್ದುಗೊಳಿಸಿದ ಕಾರಣ ಪ್ರಯಾಣಿಕರಿಗೆ ಕಲ್ಪಿಸಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರು, ವಿಮಾನದ ಸಿಬ್ಬಂದಿಯ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ವಿಮಾನಯಾನ ಸಂಸ್ಥೆ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.