Site icon Vistara News

Pankaj Tripathi: ಚುನಾವಣೆ ಆಯೋಗದ ‘ಐಕಾನ್’‌ ಸ್ಥಾನ ತೊರೆದ ಪಂಕಜ್‌ ತ್ರಿಪಾಠಿ; ಕಾರಣ ಇದು

Pankaj Tripathi

Actor Pankaj Tripathi Steps Down As Election Commission's National Icon

ನವದೆಹಲಿ: ಮಿರ್ಜಾಪುರ ವೆಬ್‌ ಸಿರೀಸ್‌ (Mirzapur Web Series) ಖ್ಯಾತಿ ಬಾಲಿವುಡ್‌ ನಟ ಪಂಕಜ್‌ ತ್ರಿಪಾಠಿ (Pankaj Tripathi ಅವರು ಚುನಾವಣೆ ಆಯೋಗದ ‘ರಾಷ್ಟ್ರೀಯ ಐಕಾನ್‌’ (National Icon’ of the Election Commission of India) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವಯಂ ಪ್ರೇರಿತರಾಗಿಯೇ ಪಂಕಜ್‌ ತ್ರಿಪಾಠಿ ಅವರು ರಾಷ್ಟ್ರೀಯ ಐಕಾನ್‌ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಚುನಾವಣೆ ಆಯೋಗವು ಸ್ಪಷ್ಟಪಡಿಸಿದೆ. “ಪಂಕಜ್‌ ತ್ರಿಪಾಠಿ ಅವರು ಚುನಾವಣೆ ಆಯೋಗದ ರಾಷ್ಟ್ರೀಯ ಐಕಾನ್‌ ಸ್ಥಾನದಿಂದ ಕೆಳಗಿಳಿದಿದ್ದಾರೆ. ಪಂಕಜ್‌ ತ್ರಿಪಾಠಿ ಅವರು ಮುಂಬರುವ ಸಿನಿಮಾದಲ್ಲಿ ರಾಜಕೀಯ ನಾಯಕನ ಪಾತ್ರ ನಿಭಾಯಿಸುತ್ತಿರುವ ಕಾರಣ ಸ್ವಯಂಪ್ರೇರಿತರಾಗಿ ಅವರು ಸ್ಥಾನದಿಂದ ಕೆಳಗಿಳಿದಿದ್ದಾರೆ. ಪಂಕಜ್‌ ತ್ರಿಪಾಠಿ ಅವರು ಇದುವರೆಗೆ ಮೂಡಿಸಿದ ಜಾಗೃತಿಯನ್ನು ಆಯೋಗವು ಸ್ಮರಿಸುತ್ತದೆ” ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಚುನಾವಣೆ ಆಯೋಗ ಪೋಸ್ಟ್‌ ಮಾಡಿದೆ.

ಪಂಕಜ್‌ ತ್ರಿಪಾಠಿ ಅವರು 2022ರ ಅಕ್ಟೋಬರ್‌ನಲ್ಲಿ ಚುನಾವಣೆ ಆಯೋಗದ ರಾಷ್ಟ್ರೀಯ ಐಕಾನ್‌ ಎಂದು ಘೋಷಿಸಲಾಗಿತ್ತು. ಸದ್ಯ, ಪಂಕಜ್‌ ತ್ರಿಪಾಠಿ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ‘ಮೈ ಹೂಂ ಅಟಲ್’‌ ಸಿನಿಮಾದಲ್ಲಿ ವಾಜಪೇಯಿ ಅವರ ಪಾತ್ರ ನಿರ್ವಹಿಸಿದ್ದಾರೆ. ಮೈ ಹೂಂ ಅಟಲ್‌ ಸಿನಿಮಾವು ಜನವರಿ 19ರಂದು ಬಿಡುಗಡೆಯಾಗಲಿದೆ. ಇದೇ ಕಾರಣದಿಂದಾಗಿ ಚುನಾವಣೆ ಆಯೋಗದ ಐಕಾನ್‌ ಸ್ಥಾನದಿಂದ ಪಂಕಜ್‌ ತ್ರಿಪಾಠಿ ಅವರು ಕೆಳಗಿಳಿದಿದ್ದಾರೆ.

ಇದನ್ನೂ ಓದಿ: Film on Vajpayee | ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ

ಬಿಹಾರ ಮೂಲದ ಪಂಕಜ್‌ ತ್ರಿಪಾಠಿ ಅವರು ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಕಾಲೇಜು ದಿನಗಳಲ್ಲಿ ಎಬಿವಿಪಿ ಸದಸ್ಯರಾಗಿದ್ದರು. ಗ್ಯಾಂಗ್ಸ್‌ ಆಫ್‌ ವಾಸೆಪುರ್‌, ಮಿರ್ಜಾಪುರ್‌, ಮಿಮಿ ಸೇರಿ ಹತ್ತಾರು ಸಿನಿಮಾ, ವೆಬ್‌ ಸಿರೀಸ್‌ಗಳಲ್ಲಿ ನಟಿಸುವ ಮೂಲಕ ಪ್ರತಿಭಾವಂತ ನಟ ಎನಿಸಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಖಡಕ್‌ ಸಿಂಗ್‌ ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version