ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಬೇಕು ಎಂದು ಆದೇಶ ಬಂದರೆ, ಅದನ್ನು ಪಾಲಿಸಿ ಕಾರ್ಯಗತಗೊಳಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಭಾರತೀಯ ಸೇನೆಯ ಉತ್ತರ ವಲಯದ ಲೆಫ್ಟಿನೆಂಟ್ ಕಮಾಂಡರ್ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದರು. ಆ ಮಾತಿಗೆ ಬಾಲಿವುಡ್ ನಟಿ ರಿಚಾ ಚಡ್ಡಾ (Richa Chadha)ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಉಪೇಂದ್ರ ದ್ವಿವೇದಿ ಮಾತಿನ ಬೆನ್ನಲ್ಲೇ ರಿಚಾ ಚಡ್ಡಾ ಅವರು ತಮ್ಮ ಟ್ವಿಟರ್ನಲ್ಲಿ ‘ಗಲ್ವಾನ್ ಹಾಯ್ ಎನ್ನುತ್ತಿದೆ (Galwan says hi)’ ಎಂದು ಬರೆದುಕೊಂಡಿದ್ದರು. ರಿಚಾ ಚಡ್ಡಾ ಮತ್ತೇನೂ ಜಾಸ್ತಿ ಬರೆದುಕೊಂಡಿಲ್ಲ. ಆದರೆ ಲೆಫ್ಟಿನೆಂಟ್ ಜನಲರ್ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡುತ್ತಿದ್ದಂತೆ, ಅವರು ಗಲ್ವಾನ್ ಬಗ್ಗೆ ಮಾತನಾಡಿದ್ದಾರೆ.
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಆ ಹೊಡೆದಾಟದಲ್ಲಿ ಭಾರತದ 20 ಯೋಧರು ಮೃತಪಟ್ಟಿದ್ದರು. ಚೀನಾದ 35-40 ಸೈನಿಕರು ಮೃತಪಟ್ಟಿದ್ದಾಗಿ ವರದಿಯಾದರೂ ಈ ಬಗ್ಗೆ ಅಧಿಕೃತ ಮಾಹಿತಿ ಇದುವರೆಗೆ ಹೊರಬಿದ್ದಿಲ್ಲ. ಅದೊಂದು ಸೂಕ್ಷ್ಮ ವಿಚಾರವಾಗಿಯೇ ಮುಂದುವರಿಯುತ್ತಿದೆ. ಅಲ್ಲಿ ಭಾರತ-ಚೀನಾ ಮಧ್ಯೆ ಸಂಘರ್ಷ ಬೂದಿಮುಚ್ಚಿದ ಕೆಂಡದಂತೆ ಇದ್ದೇ ಇದೆ.
ಈಗ ಬಾಲಿವುಡ್ ನಟಿ ರಿಚಾ ಚಡ್ಡಾ ಅದೇ ಗಲ್ವಾನ್ ಸಂಘರ್ಷದ ವಿಷಯವನ್ನಿಟ್ಟುಕೊಂಡು, ಸೇನೆಯನ್ನು ಸಾಮರ್ಥ್ಯಕ್ಕೆ ಅವಮಾನ ಮಾಡುತ್ತಿದ್ದಾರೆ. ಗಲ್ವಾನ್ ಘರ್ಷಣೆಗೆ ಇನ್ನೂ ಪ್ರತ್ಯುತ್ತರ ಕೊಡಲು ಆಗಲಿಲ್ಲ, ಅಂಥದ್ದರಲ್ಲಿ ಪಾಕ್ ಆಕ್ರಮಿಕ ಕಾಶ್ಮೀರ ಪಡೆಯಲು ಸಜ್ಜಾಗಿದ್ದೇವೆ ಎಂದು ಸೇನಾ ಲೆಫ್ಟಿನೆಂಟ್ ಹೇಳಿಕೊಳ್ಳುತ್ತಿದ್ದಾರೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ನೆಟ್ಟಿಗರು ತೀವ್ರ ಕಿಡಿಕಾರುತ್ತಿದ್ದಾರೆ.
ಇದು ನಮ್ಮ ಸೇನೆಯನ್ನು ಅವಮಾನ ಮಾಡುವುದಕ್ಕೋಸ್ಕರವೇ ಮಾಡಿದ ಟ್ವೀಟ್. ರಿಚಾ ಚಡ್ಡಾ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಬಿಜೆಪಿ ನಾಯಕ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಅಷ್ಟೇ ಅಲ್ಲ, ಹಲವು ಪತ್ರಕರ್ತರು, ವಕೀಲರು ಮತ್ತಿತರ ಗಣ್ಯರು, ಜನಸಾಮಾನ್ಯರೂ ರಿಚಾ ಚಡ್ಡಾ ಟ್ವೀಟ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
20 ವೀರ ಯೋಧರು ಗಲ್ವಾನ್ನಲ್ಲಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಆದರೆ ಈ ಉರ್ದುವುಡ್ ನಟಿ ರಿಚಾ ಚಡ್ಡಾ ನಮ್ಮ ಭಾರತೀಯ ಸೇನೆಯನ್ನೇ ಅಪಹಾಸ್ಯ ಮಾಡುತ್ತಿದ್ದಾಳೆ. ಆಕೆಗಿದು ನಾಚಿಕೆಗೇಡಷ್ಟೇ ಅಲ್ಲ, ಅವಳ ಅಧಃಪತನ ಎಂದು ಸುಪ್ರೀಂಕೋರ್ಟ್ ವಕೀಲ ಶಶಾಂಕ್ ಶೇಖರ್ ಝಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸಿದ್ಧ, ಅಂಥ ಯಾವುದೇ ಆದೇಶ ಬಂದರೂ ನಾವು ರೆಡಿ ಎಂದ ಸೇನಾ ಜನರಲ್ ದ್ವಿವೇದಿ