ಮುಂಬೈ: ಪಠಾಣ್ ಹಾಗೂ ಜವಾನ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಮಹಾರಾಷ್ಟ್ರ ಸರ್ಕಾರವು ದಿಢೀರನೆ ವೈ ಪ್ಲಸ್ ಶ್ರೇಣಿಯ ಭದ್ರತೆ (Y+ Category) ಒದಗಿಸಿದೆ. ಬಾಲಿವುಡ್ ನಟನಿಗೆ ಹಲವು ರೀತಿಯಲ್ಲಿ ಜೀವ ಬೆದರಿಕೆ ಇರುವ ಕಾರಣ ವೈ ಪ್ಲಸ್ ಕೆಟಗರಿ ಭದ್ರತೆ ಒದಗಿಸಲಾಗಿದೆ ಎಂಬುದನ್ನು ಮುಂಬೈ ಪೊಲೀಸ್ ಮೂಲಗಳು ದೃಢಪಡಿಸಿವೆ.
ಮಹಾರಾಷ್ಟ್ರದ ಉನ್ನತ ಪ್ರಭಾವಿ ಸಮಿತಿಯು ಶಾರುಖ್ ಖಾನ್ ಅವರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಭದ್ರತೆ ಒದಗಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆ ವೇಳೆ ಉಂಟಾದ ವಿವಾದದ ಬಳಿಕ ನಟನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದೇ ಕಾರಣಕ್ಕಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
The Maharashtra government increases the security of Actor Shah Rukh Khan to Y+ after he allegedly received death threats. Shahrukh Khan had given a written complaint to the state government that he had been receiving death threat calls after the films 'Pathan' and 'Jawan'.:…
— ANI (@ANI) October 9, 2023
ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ತೊಟ್ಟು ನೃತ್ಯ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಾಗೆಯೇ, ದೇಶಾದ್ಯಂತ ಸಿನಿಮಾವನ್ನು ನಿಷೇಧ ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಇದಾದ ಬಳಿಕ ಬಾಲಿವುಡ್ ನಟನಿಗೆ ಹಲವರಿಂದ ಜೀವ ಬೆದರಿಕೆ ಕರೆಗಳು ಬಂದಿದ್ದವು ಎನ್ನಲಾಗಿದೆ. ಆದರೆ, ಭದ್ರತೆ ಒದಗಿಸಲು ಇದೇ ಕಾರಣ ಎಂಬುದನ್ನು ಪೊಲೀಸ್ ಮೂಲಗಳು ದೃಢಪಡಿಸಿಲ್ಲ.
ಹೀಗಿರಲಿದೆ ಭದ್ರತೆ
ವೈ ಪ್ಲಸ್ ಕೆಟಗರಿಯ ಅಡಿಯಲ್ಲಿ 11 ಸಿಬ್ಬಂದಿಯು ಶಾರುಖ್ ಖಾನ್ ಅವರಿಗೆ ಭದ್ರತೆ ಒದಗಿಸುತ್ತದೆ. ಆರು ಕಮಾಂಡೋಗಳು, ನಾಲ್ವರು ಪೊಲೀಸರು ಹಾಗೂ ಒಂದು ಸಂಚಾರ ದಟ್ಟಣೆ ಸುಗಮಗೊಳಿಸುವ ವಾಹನ ನೀಡಲಾಗುತ್ತದೆ. ಅಲ್ಲದೆ, ಮುಂಬೈನಲ್ಲಿರುವ ಶಾರುಖ್ ಖಾನ್ ನಿವಾಸ “ಮನ್ನತ್”ಗೆ 24/7 ಪೊಲೀಸ್ ಭದ್ರತೆ ಇರುತ್ತದೆ. ಅವರ ನಿವಾಸದ ಸುತ್ತ ನಡೆಯುವ ಎಲ್ಲ ಘಟನೆಗಳನ್ನು ಭದ್ರತಾ ಸಿಬ್ಬಂದಿ ಗಮನಿಸುತ್ತಿರುತ್ತದೆ. ಎಕೆ 47 ರೈಫಲ್ ಹಿಡಿದು ಆರು ಕಮಾಂಡೋಗಳು ಯಾವಾಗಲೂ ಶಾರುಖ್ ಖಾನ್ ಸುತ್ತ ಇರಲಿದ್ದಾರೆ.
ಇದನ್ನೂ ಓದಿ: Shah Rukh Khan: ಶಾರುಖ್ ಇದೀಗ ʻಅಮುಲ್ ಬೇಬಿʼ; ಪೋಸ್ಟ್ ವೈರಲ್!
ವಿವಾದದ ಮಧ್ಯೆಯೂ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಜಾಗತಿಕವಾಗಿ ಒಂದು ಸಾವಿರ ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಇದರ ನಂತರ ಬಂದ ಜವಾನ್ ಸಿನಿಮಾ ಕೂಡ 1,100 ಕೋಟಿ ರೂ. ಗಳಿಸಿದೆ. ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಡಂಕಿ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.