ಮುಂಬೈ: ರಸ್ತೆಗಳು ಹೇಗಿರಬೇಕು ಎಂದರೆ ಹೇಮಾ ಮಾಲಿನಿಯ ಕೆನ್ನೆಯ ಹಾಗೆ ನುಣುಪಾಗಿರಬೇಕು ಅಂತ ಹಿರಿಯ ರಾಜಕಾರಣಿಯೊಬ್ಬರು ಹೇಳಿದ ಮಾತು ಈಗ ದೇಶದಲ್ಲಿ ಒಂಥರಾ ಗಾದೆಯೇ ಆಗಿ ಹೋಗಿದೆ. ಆದರೆ, ವಿಶೇಷವೆಂದರೆ, ಈಗ ಈ ಹಿರಿಯ ನಟಿಯೇ ಮುಂಬಯಿಯ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈನ ಹಲವು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಹಲವು ಕಡೆ ಗುಂಡಿ ಬಿದ್ದಿದೆ. ಈ ರೀತಿ ಹಾಳಾದ ರಸ್ತೆಯಲ್ಲಿ ಗರ್ಭಿಣಿ ಸಂಚರಿಸುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಪರಿಸ್ಥಿತಿ ಆ ಮಟ್ಟಿಗೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಹೇಮಾ ಮಾಲಿನಿ ತಾವು ಇತ್ತೀಚೆಗೆ ಮುಂಬೈ ರಸ್ತೆಯಲ್ಲಿ ಬರುವಾಗ ತಮಗೆ ಆದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ʻʻಮುಂಗಾರು ಆರಂಭವಾಗಿದೆ. ಈ ಸಮಯದಲ್ಲಿ ಗುಂಡಿಗಳಿಂದ ತುಂಬಿರುವ ಈ ರಸ್ತೆಗಳಲ್ಲಿ ಗರ್ಭಿಣಿಯೊಬ್ಬಳು ಹೇಗೆ ಪ್ರಯಾಣಿಸುತ್ತಾಳೆಂದು ನಿಜಕ್ಕೂ ನನಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ರಸ್ತೆಗಳಲ್ಲೂ ಗುಂಡಿಗಳು ಬಿದ್ದಿದ್ದವು. ಯಾವ ರಸ್ತೆಗಳು ಸರಿಯಾಗಿಲ್ಲ. ಹೀಗಾಗಿ ತುಂಬಾ ಟ್ರಾಫಿಕ್ ಮತ್ತು ಅವ್ಯವಸ್ಥೆ ಇರುವುದರಿಂದ ನಾನು ಹೊರಗೆ ಹೋಗಲು ಹೆದರುತ್ತೇನೆ. ದೆಹಲಿ ಮತ್ತು ಮಥುರಾದಲ್ಲಿ ಹೆಚ್ಚು ಟ್ರಾಫಿಕ್ ಇದ್ದರೂ ರಸ್ತೆಗಳು ಸರಿಯಾಗಿವೆʼʼ ಎಂದು ಹೇಳಿದ್ದಾರೆ.
ʻʻನಾನು ಹಿಂದೆಲ್ಲ ಮುಂಬೈನ ಜುಹಾ, ಚೈನಾಕ್ರೀಕ್ ಮತ್ತು ದೈಸರ್ ಪ್ರದೇಶಗಳಲ್ಲಿ ಶೂಟಿಂಗ್ಗಾಗಿ ಓಡಾಡಿದ್ದೇನೆ. ಆಗ ಪ್ರಯಾಣ ಅಷ್ಟು ಕಷ್ಟಕರವಾಗಿರಲಿಲ್ಲ. ಆದರೆ, ಈಗ ಮುಂಬೈಗೆ ಏನಾಗಿದೆʼʼ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ| ಮುಂಬೈನಲ್ಲಿ ನಾಲ್ಕು ಹಂತದ ಕಟ್ಟಡ ಕುಸಿತ, ಮೂವರ ಸಾವು, 13 ಮಂದಿಗೆ ಗಂಭೀರ ಗಾಯ