Site icon Vistara News

ಸಲ್ಮಾನ್‌ ಖಾನ್‌ ಬಳಿಕ ಈಗ ನಟಿ ಸ್ವರ ಭಾಸ್ಕರ್‌ಗೆ ಜೀವ ಬೆದರಿಕೆ, ಪೊಲೀಸರಿಂದ ಬಿಗಿ ಭದ್ರತೆ

ಮುಂಬಯಿ: ಖ್ಯಾತ ಚಿತ್ರ ನಟ ಸಲ್ಮಾನ್‌ ಖಾನ್‌ ಅವರಿಗೆ ಇತ್ತೀಚೆಗೆ ಪಂಜಾಬಿನ ಲಾರೆನ್ಸ್‌ ಬಿಷ್ಣೋಯಿ ತಂಡ ಜೀವ ಬೆದರಿಕೆ ಒಡ್ಡಿದ ಬೆನ್ನಿಗೇ ನಟಿ ಸ್ವರ ಭಾಸ್ಕರ್‌ ಅವರಿಗೆ ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ.

ವರ್ಸೋವಾದಲ್ಲಿರುವ ನಟಿಯ ಮನೆಗೆ ಕಳುಹಿಸಲಾಗಿರುವ ಪತ್ರದಲ್ಲಿ ಆಕೆಯನ್ನು ಕೊಲ್ಲುವುದಾಗಿ ಎಚ್ಚರಿಕೆ ನೀಡಲಾಗಿದೆ. ಹಿಂದಿಯಲ್ಲಿ ಬರೆದಿರುವ ಪತ್ರ ಇದಾಗಿದ್ದು, ಬಾಲಿವುಡ್‌ನಲ್ಲಿ ಆತಂಕ ಸೃಷ್ಟಿಯಾಗಿದೆ.

ಸ್ವರಭಾಸ್ಕರ್‌ ಅವರು ಜನಪ್ರಿಯ ಮತ್ತು ಪ್ರತಿಭಾವಂತ ನಟಿ. ಅದೇ ಹೊತ್ತಿಗೆ ಅವರು ಕೆಲವು ವಿಚಾರಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವಿವಾದಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚೆಗೆ ಅವರು ಸಾವರ್ಕರ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮನೆಗೆ ಅಂಚೆ ಮೂಲಕ ಕಳುಹಿಸಲಾಗಿರುವ ಬೆದರಿಕೆ ಪತ್ರದಲ್ಲೂ ಸಾವರ್ಕರ್‌ ವಿಚಾರವನ್ನು ಉಲ್ಲೇಖಿಸಲಾಗಿದೆ. ಈ ದೇಶದ ಯುವಜನರು ಸಾವರ್ಕರ್‌ ಅವರಿಗೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಎರಡು ದಿನಗಳ ಹಿಂದೆ ಸ್ವರಭಾಸ್ಕರ್‌ ಅವರ ಮನೆಗೆ ಪತ್ರ ಬಂದಿದ್ದು ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವರ್ಸೋವಾ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದು, ಮನೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ| ಮೂಸೆವಾಲಾ ಸ್ಥಿತಿ ನಿಮಗೂ ಬರಲಿದೆ: ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ

Exit mobile version