ಮುಂಬಯಿ: ಪ್ಯಾಶನ್ ಶೋ ಒಂದರಲ್ಲಿ ನಟಿ ತಾಪ್ಸಿ ಪನ್ನು (Taapsee Pannu) ಧರಿಸಿದ ದೇವಿ ಲಕ್ಷ್ಮಿಯ ಚಿತ್ರವಿರುವ ನೆಕ್ಲೆಸ್ ಧರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಅವರ ಮೇಲೆ ಮಧ್ಯಪ್ರದೇಶದ ಛತ್ರಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದೇ ವೇಳೆ ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿರುವ ಚಿತ್ರದ ಕಾಮೆಂಟ್ ಸೆಕ್ಷನ್ನಲ್ಲಿ ಅವರಿಗೆ ಬೇಕಾಬಿಟ್ಟಿ ಬೈಗುಳಗಳೂ ದೊರೆತಿವೆ.
ಫ್ಯಾಶನ್ ಶೋನಲ್ಲಿ ತಾಪ್ಸಿ ಪನ್ನು ಲೋ ಕಟ್ ಕೆಂಪು ಬಟ್ಟೆಯನ್ನು ಧರಿಸಿದ್ದರು. ಜತೆಗೆ ದೊಡ್ಡದಾದ ನೆಕ್ಲೆಸ್ ಕೂಡ ಧರಿಸಿದ್ದಾರೆ. ದಪ್ಪನೆಯ ಆ ಒಡವೆ ತಾಪ್ಸಿ ಪನ್ನು ಅವರ ಎದೆಯ ನಡುವೆ ನಿಂತಿದೆ. ಅದರಲ್ಲಿ ದೊಡ್ಡ ಗಾತ್ರದ ಲಕ್ಷ್ಮೀ ದೇವಿಯ ಚಿತ್ರವನ್ನು ಅಚ್ಚೊತ್ತಲಾಗಿದೆ. ಈ ವಿನ್ಯಾಸಕ್ಕೆ ಸಂಪ್ರದಾಯವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ವಪೂಜಿತೆ ಲಕ್ಷ್ಮೀ ದೇವಿಯನ್ನು ಫ್ಯಾಶನ್ ಶೋಗಾಗಿ ಬಳಸಿದ್ದು ತಪ್ಪು. ಅದರಲ್ಲೂ ಮಹಿಳೆಯೊಬ್ಬಳ ಎದೆ ಸೀಳಿನಲ್ಲಿಟ್ಟು ಛಾಯಚಿತ್ರ ತೆಗೆದಿರುವುದು ಅಕ್ಷಮ್ಯ ಎಂದು ಅವರು ವಾದಿಸಿದ್ದಾರೆ.
ಇವೆಲ್ಲದರ ನಡುವೆ ಮಧ್ಯಪ್ರದೇಶ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಗೌರ್ ತಾಪ್ಸಿ ಮೇಲೆ ಪೊಲೀಸ್ ದೂರು ನೀಡಿದ್ದಾರೆ. ನಟಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತಾಪ್ಸಿ ಪನ್ನುಗೆ ನೋಟಿಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : Taapsee Pannu: ಮಿಸ್ ಇಂಡಿಯಾ ಸ್ಪರ್ಧಿಯಾಗಿದ್ದಾಗ ಅವಮಾನಕ್ಕೊಳಗಾಗಿದ್ದೆ: ತಾಪ್ಸಿ ಪನ್ನು
ಅಂದಹಾಗೆ ಏಕಲವ್ಯ ಗೌರ್ ಹಿಂದ್ ರಕ್ಷಕ್ ಸಂಘಟನೆಯ ಸಂಚಾಲಕರು. ಹೀಗಾಗಿ ಅವರು ತಾಪ್ಸಿ ಮಾಡಿರುವ ಎಡವಟ್ಟಿಗೆ ಗರಂ ಹಾಕಿದ್ದಾರೆ. ಅತ್ತ ತಮ್ಮ ಮೇಲೆ ಕೇಸ್ ಬಿದ್ದ ಹೊರತಾಗಿಯೂ ತಾಪ್ಸಿ ಪನ್ನು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ರಿಲಯನ್ಸ್ ಜ್ಯುವೆಲ್ಸ್ನ ಅಕ್ಷಯ ತೃತೀಯ ಕಲೆಕ್ಷನ್
ತಾಪ್ಸಿ ಪನ್ನು ಧರಿಸಿದ್ದ ಲಕ್ಷ್ಮೀ ದೇವಿಯ ಚಿತ್ರವಿರುವ ನೆಕ್ಲೆಸ್, ರಿಲಯನ್ಸ್ ಜ್ಯುವೆಲ್ಸ್ನ ಅಕ್ಷಯ ತೃತೀಯ ಕಲೆಕ್ಷನ್. ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ತಾಪ್ಸಿ ಅದನ್ನು ಧರಿಸಿದ್ದರು. ತಾಪ್ಸಿ ಪನ್ನು ಈ ಮಾಹಿತಿಯನ್ನು ಇನ್ಸ್ಟಾಗ್ರಾಮ್ ವಿಡಿಯೊದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಂಜಾವೂರ್ ಕಲಾಕೃತಿಯನ್ನು ಆಧರಿಸಿ ತಯಾರಿಸಿರುವ ಆಭರಣ ಅದು ಎಂದೂ ಅವರು ಹೇಳಿಕೊಂಡಿದ್ದಾರೆ. ಅಮಿತ್ ಠಾಕೂರ್ ತಾಪ್ಸಿಗೆ ಹೇರ್ ಸ್ಟೈಲ್ ಮಾಡಿದ್ದರೆ, ವಿನ್ಯಾಸಕಾರ ಮನೋಜ್ ಬಟ್ಟೆಯನ್ನು ವಿನ್ಯಾಸ ಮಾಡಿದ್ದಾರೆ.
ನಟಿ ತಾಪ್ಸಿ ಪನ್ನು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸೇರಿ ಒಟ್ಟು 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಜತೆಗೆ ಡಂಕಿ ಸಿನಿಮಾ ಬಿಡುಗಡೆಯಾಗಬೇಕಾಗಿದೆ.