ನವ ದೆಹಲಿ: ಅದಾನಿ-ಹಿಂಡೆನ್‌ಬರ್ಗ್ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ನಿಯೋಜಿತ ತಜ್ಞರ ಸಮಿತಿಯು ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್ ನೀಡಿದೆ. ಅದಾನಿ ಕಂಪನಿಗಳ ವಿರುದ್ಧ ಹಿಂಡೆನ್ ಬರ್ಗ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಮಾರುಕಟ್ಟೆ ನಿಯಂತ್ರಕ ಸೆಬಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಈಗಲೇ ಹೇಳಲಾಗದು ಎಂದು ತಜ್ಞರ ಸಮಿತಿ ಹೇಳಿದೆ. (Adani-Hindenburg )
ಅದಾನಿ ಗ್ರೂಪ್, ವಿದೇಶಗಳಲ್ಲಿ ನಕಲಿ ಕಂಪನಿಗಳ ಮೂಲಕ ತನ್ನ ಕಂಪನಿಗಳ ಷೇರು ದರವನ್ನು ಕೃತಕವಾಗಿ ಏರಿಸಿದೆ ಎಂದು ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ತನ್ನ ವರದಿಯಲ್ಲಿ ಆರೋಪಿಸಿತ್ತು. ಆದರೆ ಅದಾನಿ ಗ್ರೂಪ್ ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಮಾರುಕಟ್ಟೆ ನಿಯಂತ್ರಜ ಸೆಬಿ ಅದನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಸಮಿತಿಯ ವರದಿ ತಿಳಿಸಿದೆ.
ಸೆಬಿ ಇದುವರೆಗೆ ನೀಡಿರುವ ವಿವರಣೆಗಳನ್ನು ಪರಿಗಣಿಸಿದರೆ, ಈ ಪ್ರಕರಣದಲ್ಲಿ ಸೆಬಿ ವಿಫಲವಾಗಿದೆ ಎಂದು ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಆರು ಸದಸ್ಯರನ್ನು ಒಳಗೊಂಡಿರುವ ತಜ್ಞರ ಸಮಿತಿ ಸಭೆ ತಿಳಿಸಿದೆ. ಸೆಬಿಯು ಅದಾನಿ ಕಂಪನಿಗಳ 13 ವರ್ಗಾವಣೆಗಳನ್ನು ಗುರುತಿಸಿ ಪರಿಶೀಲಿಸಿತ್ತು.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ನೇತೃತ್ವದ ತಜ್ಞರ ಸಮಿತಿಯು, ಅದಾನಿ ಕಂಪನಿಗಳ ನಿರ್ದಿಷ್ಟ ವರ್ಗಾವಣೆಗಳಿಗೆ ಸಂಬಂಧಿಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದೆ. ಕಾಲಮಿತಿಯ ಚೌಕಟ್ಟಿನಲ್ಲಿ ತನಿಖೆ ಪೂರ್ಣವಾಗಬೇಕಿದೆ ಎಂದೂ ತಿಳಿಸಿದೆ.
ನಿವೃತ್ತ ನ್ಯಾಯಮೂರ್ತಿ ಜಪಿ ದೇವಧರ್, ಐಸಿಐಸಿಐ ಬ್ಯಾಂಕ್‌ನ ಮಾಜಿ ಎಂಡಿ ಮತ್ತು ಸಿಇಒ ಕೆ.ವಿ ಕಾಮತ್, ಎಸ್‌ಬಿಐನ ಮಾಜಿ ಅಧ್ಯಕ್ಷ ಓ.ಪಿ ಭಟ್, ಇನ್ಫೋಸಿಸ್ ಚೇರ್ಮನ್ ನಂದನ್ ನಿಲೇಕಣಿ, ವಕೀಲ ಸೋಮಶೇಖರ್ ಸುಂದರೇಶನ್ ಅವರು ಸಮಿತಿಯಲ್ಲಿದ್ದರು.
2023ರ ಜನವರಿ 24ರಂದು ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಅದಾನಿ ಗ್ರೂಪ್‌ನ 10 ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 12 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಅದಾನಿ ಸಮೂಹವು ಕೃತಕವಾಗಿ ಕಂಪನಿಗಳ ದರವನ್ನು ಏರಿಸಿದೆ. ನಕಲಿ ಕಂಪನಿಗಳನ್ನು ಸೃಷ್ಟಿಸಿ, ಭಾರತೀಯ ಷೇರು ಪೇಟೆಯಲ್ಲಿ ಗಳಿಸಿದ ನಿಧಿಯನ್ನು ವರ್ಗಾಯಿಸಿದೆ ಎಂದು ಆರೋಪಿಸಲಾಗಿತ್ತು. ಹಿಂಡೆನ್‌ಬರ್ಗ್ ಮಾಡಿರುವ ಎಲ್ಲ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿತ್ತು. ಹಿಂಡೆನ್‌ಬರ್ಗ್ ಶಾರ್ಟ್ ಸೆಲ್ಲಿಂಗ್ ಮಾಡುತ್ತಿರುವುದನ್ನು ತನ್ನ ವರದಿಯಲ್ಲಿ ಒಪ್ಪಿಕೊಂಡಿತ್ತು. ಹೀಗಾಗಿ ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯವೂ ಉಂಟಾಗಿತ್ತು.
ಇದನ್ನೂ ಓದಿ: Adani Group : ಅದಾನಿ-ಹಿಂಡೆನ್‌ಬರ್ಗ್ ತನಿಖಾ ವರದಿಯನ್ನು ಆ.14ರೊಳಗೆ ಸಲ್ಲಿಸಲು ಸೆಬಿಗೆ ಸುಪ್ರೀಂಕೋರ್ಟ್ ಸೂಚನೆ