ನವದೆಹಲಿ: ಅದಾನಿ ಗ್ರೂಪ್ ಷೇರು ಅಕ್ರಮ ವ್ಯವಹಾರ (Adani Row) ಕುರಿತು ತನಿಖೆ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ 16 ಪ್ರತಿಪಕ್ಷಗಳು ಸಂಸತ್ ಸಂಕೀರ್ಣದಿಂದ ಜಾರಿ ನಿರ್ದೇಶನಾಲಯ(ED) ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದವು. ಈ ವೇಳೆ, ಮಧ್ಯೆಯೇ ಪೊಲೀಸರು ತಡೆದಿದ್ದರಿಂದ, ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ಬುಧವಾರ ಸಂಸತ್ ಕಲಾಪಗಳು ಮುಂದೂಡಿದ್ದರಿಂದ ಪ್ರತಿಪಕ್ಷದ ನಾಯಕರು ದೆಹಲಿಯ ಸಂಸದ್ ಮಾರ್ಗದಲ್ಲಿರುವ ಸಂಸತ್ತಿನಿಂದ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಇ.ಡಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಆದರೆ, ದಿಲ್ಲಿ ಪೊಲೀಸರು ಮೆರವಣಿಗೆಯನ್ನು ವಿಜಯ್ ಚೌಕ್‌ನ ಆಚೆಗೆ ಹೋಗಲು ಬಿಡಲಿಲ್ಲ. ಹಾಗಾಗಿ, ಈ ಮೆರವಣಿಗೆ ಸಂಸತ್ತಿನಿಂದ ಕೇವಲ ಅರ್ಧ ಕಿ.ಮೀ. ದೂರ ಹೋಗಲಷ್ಟೇ ಸಾಧ್ಯವಾಯಿತು.
144 ಸೆಕ್ಷನ್ ಜಾರಿ ಮಾಡಿದ್ದರಿಂದ ನಾಲ್ಕಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಹಾಗಾಗಿ, ಪೊಲೀಸರು ಪ್ರತಿಭಟನೆ ಮುಂದಕ್ಕೆ ಹೋಗದಂತೆ ವಿಜಯ್ ಚೌಕ್‌ನಲ್ಲಿ ಪ್ರತಿಪಕ್ಷಗಳ ಸಂಸದರನ್ನು ತಡೆದರು. ಕೊನೆಗೆ ಅನಿವಾರ್ಯವಾಗಿ ಪ್ರತಿ ಪಕ್ಷದ ಸಂಸದರು ಸಂಸತ್ ಸಂಕೀರ್ಣಕ್ಕೆ ಹಿಂದಿರುಗಬೇಕಾಯಿತು.
ಇದನ್ನೂ ಓದಿ: Rahul Gandhi: ರಾಹುಲ್ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ
ಸುಮಾರು 18 ಪ್ರತಿಪಕ್ಷಗಳ ಸಂಸದರು ಅದಾನಿ ವಿಷಯದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮನವಿ ಪತ್ರ ನೀಡಲು ಮುಂದಾಗಿದ್ದರು. ಆದರೆ ಸರ್ಕಾರವು ನಮಗೆ ಮೆರವಣಿಗೆ ಮಾಡಲು ಅವಕಾಶ ನೀಡುತ್ತಿಲ್ಲ. ಪೊಲೀಸರು ವಿಜಯ್ ಚೌಕ್‌ನಲ್ಲಿ ನಮ್ಮನ್ನು ತಡೆದಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.