ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆಗೆ (New Parliament Building) ಕ್ಷಣಗಣನೆ ಆರಂಭವಾಗಿದೆ. ಸಂಸದರು, ನಾಯಕರು, ಪ್ರತಿಪಕ್ಷಗಳ ನಾಯಕರು, ಕೇಂದ್ರ ಸಚಿವರು ಸೇರಿ ನೂರಾರು ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ಇನ್ನು, ಸಂಸತ್ ಭವನದ ಉದ್ಘಾಟನೆ ಹಿನ್ನೆಲೆಯಲ್ಲಿ ಶನಿವಾರ ಸಂಜೆಯೇ ತಮಿಳುನಾಡಿನ ಶೈವ ಪರಂಪರೆಯ ಅಧೀನಾಮ್ ಮಠದ ಸ್ವಾಮೀಜಿಗಳು ನರೇಂದ್ರ ಮೋದಿ ಅವರಿಗೆ ಶಾಸ್ತ್ರೋಕ್ತವಾಗಿ ಸೆಂಗೋಲ್ ಅಥವಾ ರಾಜದಂಡವನ್ನು ಹಸ್ತಾಂತರಿಸಿದರು.
ನೂತನ ಸಂಸತ್ ಭವನದಲ್ಲಿರುವ ಸ್ಪೀಕರ್ ಪೀಠದ ಬಳಿ ಚೋಳರ ಕಾಲದ ಸೆಂಗೋಲ್ಅನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದುವರೆಗೆ ಮ್ಯೂಸಿಯಂನಲ್ಲಿದ್ದ ಸೆಂಗೋಲ್‌ಅನ್ನು ನೂತನ ಸಂಸತ್‌ನಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಹಾಗಾಗಿ, ತಮಿಳುನಾಡಿನ ಧರ್ಮಾಪುರಂ ಹಾಗೂ ತಿರುವಾವದುತುರೈಂನ ಶೈವ ಪರಂಪರೆಯ ಅಧೀನಾಮ್ ಮಠದ ಸ್ವಾಮೀಜಿಗಳು ನರೇಂದ್ರ ಮೋದಿ ಅವರ ನಿವಾಸದಲ್ಲಿ ಸೆಂಗೋಲ್‌ಅನ್ನು ಅವರಿಗೆ ಹಸ್ತಾಂತರಿಸಿದ್ದಾರೆ.
ಮೋದಿಗೆ ಸೆಂಗೋಲ್ ಹಸ್ತಾಂತರ
PM @narendramodi meets the Adheenams today at his residence and take their blessings. @PMOIndia@nsitharaman@kishanreddybjp#MyParilamentMypride#SengolAtNewParliament#NewParliamentBuilding pic.twitter.com/DBWkDJm7xf
— PIB in KERALA (@PIBTvpm) May 27, 2023
ಮೋದಿ ಅವರ ಹಣೆಗೆ ತಿಲಕ ಇಟ್ಟು, ಹಾರ ಹಾಕಿ, ಶಾಲು ಹೊದಿಸಿದ ಸ್ವಾಮೀಜಿಗಳು ಬಳಿಕ ಮೋದಿ ಅವರಿಗೆ ಸೆಂಗೋಲ್‌ಅನ್ನು ನೀಡಿದರು. ಮೋದಿ ಅವರು ರಾಜದಂಡಕ್ಕೆ ನಮಸ್ಕಾರ ಮಾಡಿದರು. ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: New Parliament Building : ನೂತನ ಸಂಸತ್ ಭವನ ಉದ್ಘಾಟನೆಗೆ ಶೃಂಗೇರಿ ಪುರೋಹಿತರು
ವಿಶೇಷವೆಂದರೆ ಸಂಸತ್ ಭವನದಲ್ಲಿ ನಡೆಯಲಿರುವ ಉದ್ಘಾಟನೆ ಸಂಬಂಧಿತ ಪೂಜಾ ಕೈಂಕರ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪುರೋಹಿತರಿಗೆ ನೀಡಲಾಗಿದೆ. ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದಕ್ಕಾಗಿ ಶೃಂಗೇರಿಯ ಪುರೋಹಿತರ ತಂಡ ಆಗಲೇ ದಿಲ್ಲಿ ತಲುಪಿಸಿದ್ದು ಶನಿವಾರ ಸಂಜೆಯಿಂದಲೇ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಭವನವನ್ನು ಉದ್ಘಾಟಿಸಲಿದ್ದು, ಅದಕ್ಕೆ ಸಂಬಂಧಿಸಿದ ಪೂಜೆಗಳನ್ನು ಶೃಂಗೇರಿಯ ವೇದಪಾರಂಗತ ಪುರೋಹಿತರಾದ ಸೀತಾರಾಮ ಶರ್ಮ, ಶ್ರೀರಾಮ ಶರ್ಮ ಹಾಗೂ ಲಕ್ಷ್ಮೀಶ ತಂತ್ರಿ ಅವರು ನೆರವೇರಿಸಲಿದ್ದಾರೆ.