ಶ್ರೀಹರಿಕೋಟ: ಸೂರ್ಯನ ಮೇಲ್ಮೈನಲ್ಲಿ ಅಧ್ಯಯನ ನಡೆಸಲು ಇಸ್ರೋ ಕೈಗೊಂಡಿರುವ ಆದಿತ್ಯ ಎಲ್ 1 ಮಿಷನ್ ಉಡಾವಣೆ (Aditya L1 Launch) ಯಶಸ್ವಿಯಾಗಿದೆ. ಇದರ ಜತೆಗೆ ಪಿಎಸ್‌ಎಲ್‌ವಿ ಸಿ-57 ರಾಕೆಟ್‌ನಿಂದ ಆದಿತ್ಯ ಎಲ್ ಮಿಷನ್ ಯಶಸ್ವಿಯಾಗಿ ಬೇರ್ಪಟ್ಟಿದ್ದು, ನಿಗದಿತ ಕಕ್ಷೆ ಸೇರುವಲ್ಲೂ ಸಫಲವಾಗಿದೆ. ಇನ್ನು ರಾಕೆಟ್‌ನಿಂದ ಬೇರ್ಪಟ್ಟ ಆದಿತ್ಯ ಎಲ್ 1 ಮಿಷನ್, ಸೂರ್ಯನ ಲ್ಯಾಗ್ರೇಂಜ್ 1 ಕಕ್ಷೆ (L1 Orbit)ಯತ್ತ ಸಾಗುತ್ತಿದೆ. ಮತ್ತೊಂದೆಡೆ, ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಕೆಟ್‌ನಿಂದ ಮಿಷನ್ ಬೇರ್ಪಟ್ಟ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, “ಉಡಾವಣೆಯ ಒಂದು ಗಂಟೆಯ ಬಳಿಕ ಪಿಎಸ್ಎಲ್‌ವಿ ರಾಕೆಟ್‌ನಿಂದ ಆದಿತ್ಯ ಎಲ್ 1 ಮಿಷನ್ ಯಶಸ್ವಿಯಾಗಿ ಬೇರ್ಪಟ್ಟಿದೆ. ಇದರೊಂದಿಗೆ ಆದಿತ್ಯ ಎಲ್ 1 ಮಿಷನ್ ಪಯಣ ಲ್ಯಾಗ್ರೇಂಜ್‌ನತ್ತ ಸಾಗುತ್ತಿದೆ. ಇದಕ್ಕಾಗಿ ಮಿಷನ್ 125 ದಿನ ತೆಗೆದುಕೊಳ್ಳಲಿದೆ. ಮಿಷನ್‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಎಲ್ಲರಿಗೂ ಧನ್ಯವಾದ” ಎಂದು ಹೇಳಿದರು.
ಮೋದಿ ಅಭಿನಂದನೆ
ಉಡಾವಣೆ ಯಶಸ್ವಿಯಾಗುತ್ತಲೇ ಪ್ರಧಾನಿ ನರೇಂದ್ರ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು. “ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಆದಿತ್ಯ ಎಲ್ 1 ಮಿಷನ್‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಬಾಹ್ಯಾಕಾಶದ ಅಧ್ಯಯನದ ಮೂಲಕ ಮನುಕುಲಕ್ಕೆ ನೆರವಾಗುವಲ್ಲಿ ನಮ್ಮ ವಿಜ್ಞಾನಿಗಳ ಪ್ರಯತ್ನ ಮುಂದುವರಿಯುತ್ತಲೇ ಇರುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ಆದಿತ್ಯ L1 ಅಲ್ಲಿಗೆ ತಲುಪೋದು ಯಾವಾಗ? ಮಿಷನ್ ಬಗ್ಗೆ ನಿಮಗೀ 12 ಸಂಗತಿಗಳು ತಿಳಿದಿರಲಿ!
ಚಂದ್ರನ ಅಂಗಳಕ್ಕೆ ಇಳಿಯಲಿದೆಯೇ?
ಚಂದ್ರನ ಅಂಗಳಕ್ಕೆ ಇಳಿದು ಚಂದ್ರಯಾನ 3 ನೌಕೆಯು ಅಧ್ಯಯನ ನಡೆಸಿದಂತೆ ಆದಿತ್ಯ ಎಲ್ 1 ಮಿಷನ್ ಸೂರ್ಯನ ಅಂಗಳಕ್ಕೆ ಇಳಿಯುವುದಿಲ್ಲ ಹಾಗೂ ಸೂರ್ಯನಿಗೆ ತುಂಬ ಹತ್ತಿರದಲ್ಲಿ ಅಧ್ಯಯನ ನಡೆಸುವುದಿಲ್ಲ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್ 1 ಮಿಷನ್ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.