Site icon Vistara News

Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

Aditya L1

Aditya L1 finishes its first revolution around Lagrange Point 1 in 178 days

ನವದೆಹಲಿ: ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆಗಿರುವ ಆದಿತ್ಯ ಎಲ್‌1 (Aditya L1) ಬಾಹ್ಯಾಕಾಶ ನೌಕೆಯು ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಾಕರ್ಷಣೆ ನಿಷ್ಕ್ರಿಯವಾಗುವ ‘ಲ್ಯಾಗ್ರೇಂಜ್‌ ಪಾಯಿಂಟ್‌’ನ (L1) ಪ್ರಭಾವಲಯದ (Halo) ಮೊದಲ ಸುತ್ತು ಪೂರ್ಣಗೊಳಿಸಿದೆ. ಇದರೊಂದಿಗೆ ಕಕ್ಷೆ ಸೇರಿದ (ಇದೇ ವರ್ಷದ ಜನವರಿ 6ರಂದು ಕಕ್ಷೆ ಸೇರಿದೆ) 178 ದಿನಗಳ ಬಳಿಕ ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದಂತಾಗಿದೆ.

ಕಕ್ಷೆಯ ಮೊದಲ ಸುತ್ತು ಪೂರ್ಣಗೊಳಿಸಿರುವ ಕುರಿತು ಇಸ್ರೋ ಮಾಹಿತಿ ನೀಡಿದೆ. “ಆದಿತ್ಯ ಎಲ್‌ 1 ಮಿಷನ್‌ ಎಲ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದೆ. ಜನವರಿ 6ರಂದು ಕಕ್ಷೆ ಸೇರಿದ ಇದು 178 ದಿನಗಳ ಬಳಿಕ ಮೊದಲ ಸುತ್ತು ಪೂರ್ಣಗೊಳಿಸಿದೆ. ಇದರೊಂದಿಗೆ ಎರಡನೇ ಸುತ್ತಿನತ್ತ ಆದಿತ್ಯ ಎಲ್‌ 1 ಮಿಷನ್‌ ದಾಪುಗಾಲು ಇಟ್ಟಿದೆ” ಎಂಬುದಾಗಿ ಇಸ್ರೋ ತಿಳಿಸಿದೆ. ಇದು ಸೂರ್ಯನ ಕುರಿತು ಅಧ್ಯಯನ ಮಾಡುವಲ್ಲಿ ಇಸ್ರೋಗೆ ಸಿಕ್ಕ ಮಹತ್ವದ ಮುನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್‌ 2ರಂದು ಆದಿತ್ಯ ಎಲ್‌ 1 ಮಿಷನ್‌ ಉಡಾವಣೆಯಾಗಿದ್ದು, ಸೆಪ್ಟೆಂಬರ್‌ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತು. ಸೆಪ್ಟೆಂಬರ್‌ 5ರಂದು ಎರಡನೇ ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಅಧ್ಯಯನ ನಡೆಸಲು ಉದ್ದೇಶಿಸಿರುವ ಲ್ಯಾಂಗ್ರೇಜ್‌ ಪಾಯಿಂಟ್‌ನತ್ತ (L1 Point) ಆದಿತ್ಯ ಎಲ್‌ 1 ಮಿಷನ್‌ ಸಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ 2023ರ ಸೆಪ್ಟೆಂಬರ್‌ 2ರಂದು ನಭಕ್ಕೆ ಹಾರಿದೆ. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿದೆ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸುತ್ತಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸುತ್ತಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.

ಇದನ್ನೂ ಓದಿ: Pushpak Launch: ‘ಪುಷ್ಪಕ್‌’ ರಾಕೆಟ್ ಹ್ಯಾಟ್ರಿಕ್‌ ಉಡಾವಣೆ ಯಶಸ್ವಿ-ಇಸ್ರೋದಿಂದ ಮಹತ್ವದ ಮೈಲಿಗಲ್ಲು

Exit mobile version