Site icon Vistara News

Aditya L1: ಇಂದು ಸೂರ್ಯಗ್ರಹಣ; ಇಸ್ರೋದ ಆದಿತ್ಯ ಎಲ್‌ 1 ಮಿಷನ್‌ ಏನು ಮಾಡಲಿದೆ?

Aditya L1 Mission

Aditya L1, India's Mission To Study Sun, Will Not Catch Solar Eclipse Today

ನವದಹೆಲಿ: 2024ರ ಮೊದಲ ಸೂರ್ಯಗ್ರಹಣ (Solar Eclipse 2024) ಇಂದು (ಏಪ್ರಿಲ್ 8) ಗೋಚರಿಸಲಿದೆ. ಆದರೆ ಇದು ಭಾರತದಲ್ಲಿ (India) ಗೋಚರವಾಗುವುದಿಲ್ಲ. ನಾಸಾ (NASA) ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಸೂರ್ಯಗ್ರಹಣವು ಉತ್ತರ ಅಮೆರಿಕ (North America) ಖಂಡದಾದ್ಯಂತ ಕಾಣಿಸುತ್ತದೆ. ಮೆಕ್ಸಿಕೋ (Mexico), ಅಮೆರಿಕ (United States) ಮತ್ತು ಕೆನಡಾದಲ್ಲಿ (Canada) ಭಾರತೀಯ ಕಾಲಮಾನ ಬೆಳಗ್ಗೆ 11.07ರ ಸುಮಾರಿಗೆ ಸೂರ್ಯಗ್ರಹಣ ಪ್ರಾರಂಭವಾಗಲಿದೆ. ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಲಿದೆ. ಇನ್ನು ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಇಸ್ರೋದ ಆದಿತ್ಯ ಎಲ್‌ 1 (Aditya L1 Mission) ಮಿಷನ್‌ ಕಾರ್ಯಚಟುವಟಿಕೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆಗಿರುವ ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯು ಸೋಮವಾರ ಸೂರ್ಯಗ್ರಹಣವನ್ನು ತಪ್ಪಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಅಂದರೆ, ಸೂರ್ಯಗ್ರಹಣ ಇರುವ ಕಾರಣ ಇಂದು ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಕುರಿತು ಅಧ್ಯಯನ ನಡೆಸುವುದಿಲ್ಲ. ನಾಸಾ ಕೂಡ ಸೂರ್ಯನ ಅಧ್ಯಯನಕ್ಕಾಗಿ ಹಲವು ಮಿಷನ್‌ಗಳನ್ನು ಕೈಗೊಂಡಿದ್ದು, ಯಾವುದೇ ಮಿಷನ್‌ಗಳು ಇಂದು ಸೂರ್ಯಗ್ರಹಣವನ್ನು ಸೆರೆ ಹಿಡಿಯುವುದಿಲ್ಲ, ಅಧ್ಯಯನ ನಡೆಸುವುದಿಲ್ಲ ಎಂಬುದಾಗಿ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.

ಇಸ್ರೋ ಕಳುಹಿಸಿರುವ ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಕುರಿತು ವರ್ಷದ 365 ದಿನವೂ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಮೇಲ್ಮೈ ಕುರಿತು ಅಧ್ಯಯನ ಮಾಡುತ್ತದೆ. ಆದರೆ, ಇದು ಶತಮಾನದ ಸೂರ್ಯಗ್ರಹಣವಾಗಿರುವ ಕಾರಣ ಆದಿತ್ಯ ಎಲ್‌ 1 ಮಿಷನ್‌ ಗ್ರಹಣವನ್ನು ಗ್ರಹಿಸುವುದಿಲ್ಲ. ಆದರೆ, ಸೂರ್ಯಗ್ರಹಣದಿಂದ ಮಿಷನ್‌ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್‌ ಅವರು ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ 2023ರ ಸೆಪ್ಟೆಂಬರ್‌ 2ರಂದು ನಭಕ್ಕೆ ಹಾರಿತು. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿತ್ತು. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸುತ್ತಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ. ಪ್ರಸಕ್ತ ವರ್ಷದ ಜನವರಿ 6ರಂದು ಮಿಷನ್‌ ಕಕ್ಷೆ ಸೇರಿದೆ.

ಇದನ್ನೂ ಓದಿ: S Somanath: ಆದಿತ್ಯ ಎಲ್‌ 1 ಮಿಷನ್‌ ದಿನವೇ ಎಸ್‌.ಸೋಮನಾಥ್‌ಗೆ ಕ್ಯಾನ್ಸರ್‌; ಈಗ ಹೇಗಿದ್ದಾರೆ?

Exit mobile version