ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವದ ಸೂರ್ಯಯಾನ ಆದಿತ್ಯ ಎಲ್ 1 ಮಿಷನ್ (Aditya L1 Mission) ಕುರಿತು ಇಸ್ರೋ ಮಹತ್ವದ ಮಾಹಿತಿ ನೀಡಿದೆ. “ಸೆಪ್ಟೆಂಬರ್ 2ರಂದು ಉಡಾವಣೆಯಾದ ಮಿಷನ್ ಇದುವರೆಗೆ 9.2 ಲಕ್ಷ ಕಿಲೋಮೀಟರ್ ಚಲಿಸಿದೆ. ಇದರೊಂದಿಗೆ ಭೂಮಿಯ ಪ್ರಭಾವದ ಗೋಳದಿಂದ ಆದಿತ್ಯ ಎಲ್ 1 ಮಿಷನ್ ಬೇರ್ಪಟ್ಟಿದ್ದು, ಲ್ಯಾಗ್ರೇಂಜ್ ಪಾಯಿಂಟ್‌ನತ್ತ ಮುಖ ಮಾಡಿದೆ” ಎಂದು ಇಸ್ರೋ ತಿಳಿಸಿದೆ. ಹಾಗಾಗಿ, ಇಸ್ರೋ ಮಿಷನ್‌ಗೆ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ.
“ಲ್ಯಾಗ್ರೇಂಜ್ ಪಾಯಿಂಟ್‌ನತ್ತ ಆದಿತ್ಯ ಎಲ್ 1 ಮಿಷನ್ ನ್ಯಾವಿಗೇಟ್ ಮಾಡಿಕೊಂಡಿದೆ. ಭೂಮಿಯ ಪ್ರಭಾವದ ಗೋಳದಿಂದ ಇಸ್ರೋ ಎರಡನೇ ಬಾರಿಗೆ ಗಗನನೌಕೆಯನ್ನು ಕಳುಹಿಸುತ್ತಿದೆ. ಇದಕ್ಕೂ ಮೊದಲು ಮಂಗಳ ಮಿಷನ್ (Mars Mission) ಕೈಗೊಳ್ಳುವ ವೇಳೆ ಭೂಮಿಯ ಪ್ರಭಾವದ ಗೋಳದಿಂದ ಗಗನನೌಕೆಯನ್ನು ಕಳುಹಿಸಲಾಗಿತ್ತು” ಎಂದು ಇಸ್ರೋ ತಿಳಿಸಿದೆ. ಆದಿತ್ಯ ಎಲ್ 1 ಮಿಷನ್ 15 ಲಕ್ಷ ಕಿಲೋಮೀಟರ್ ಸಂಚರಿಸಲಿದ್ದು, ಲ್ಯಾಗ್ರೇಂಜ್ ಪಾಯಿಂಟ್ ತಲುಪಲು ಇನ್ನೂ 6 ಲಕ್ಷ ಕಿ.ಮೀ ಚಲಿಸಬೇಕಿದೆ ಎಂದು ತಿಳಿದುಬಂದಿದೆ.
Aditya-L1 Mission:
— ISRO (@isro) September 30, 2023
🔸The spacecraft has travelled beyond a distance of 9.2 lakh kilometres from Earth, successfully escaping the sphere of Earth's influence. It is now navigating its path towards the Sun-Earth Lagrange Point 1 (L1).
🔸This is the second time in succession that…
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಿಷನ್ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್ ಸೆಪ್ಟೆಂಬರ್ 2ರಂದು ನಭಕ್ಕೆ ಹಾರಿತು. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್ 1 ಮಿಷನ್ ಬೇರ್ಪಟ್ಟಿತು. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್ 1 ಮಿಷನ್ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.
ಇದನ್ನೂ ಓದಿ: Aditya L1 Mission: ಸೂರ್ಯ, ಚಂದ್ರನ ಚೆಂದದ ಸೆಲ್ಫಿ ಕಳುಹಿಸಿದ ಆದಿತ್ಯ ಎಲ್ 1; ನೀವೂ ನೋಡಿ
ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ. ಆದಿತ್ಯ ಎಲ್ 1 ಮಿಷನ್ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಸೂರ್ಯಯಾನವಾಗಿದೆ. ಹಾಗಾಗಿ, ಮಿಷನ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಲ್ಯಾಗ್ರೇಂಜ್ ಪಾಯಿಂಟ್ ತಲುಪಲು ಇದು ಒಟ್ಟು 125 ದಿನ ತೆಗೆದುಕೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ.