Site icon Vistara News

Aditya L1 Mission: ಇಂದು ಕಕ್ಷೆ ಸೇರಲಿದೆ ಆದಿತ್ಯ ಎಲ್‌ 1; ಇತಿಹಾಸಕ್ಕೆ ಇಸ್ರೋ ಸಜ್ಜು

Aditya L1 Mission

Aditya L1 mission: India's solar mission to be placed in final orbit today, says ISRO

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಶನಿವಾರ (ಜನವರಿ 6) ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ. ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆಗಿರುವ ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯು (Aditya L1 Mission) ಶನಿವಾರ ಅಂತಿಮ ಕಕ್ಷೆಯನ್ನು ಸೇರಲಿದೆ. ಸಂಜೆ 4 ಗಂಟೆ ಸುಮಾರಿಗೆ ಬಾಹ್ಯಾಕಾಶ ನೌಕೆಯು ಸೂರ್ಯನ ಲ್ಯಾಗ್ರೇಂಜ್‌ ಪಾಯಿಂಟ್‌ (L Point) ಸೇರಲಿದ್ದು, ಅಂತಿಮ ಹಂತದ ಕಕ್ಷೆ ಬದಲಾವಣೆಯಾದರೆ ಇಸ್ರೋ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಲಿದೆ.

ಈ ಮಿಷನ್ ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಏಳು ವಿಭಿನ್ನ ಪೇಲೋಡ್‌ಗಳನ್ನು ಹೊಂದಿದೆ. ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯಲ್ಲಿರುವ ಪೇಲೋಡ್‌ಗಳ ಪೈಕಿ ನಾಲ್ಕು ಸೂರ್ಯನ ಬೆಳಕನ್ನು ಪರಿಶೀಲಿಸಲಿವೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯಲಿವೆ. ಈ ಉಪಕರಣಗಳು ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳಂತಹ ಸೌರ ಚಟುವಟಿಕೆಗಳ ಡೇಟಾವನ್ನು ಒದಗಿಸಲಿವೆ ಎಂದು ಇಸ್ರೋ ಹೇಳಿದೆ.

ಸೂರ್ಯನ ಹೊರಗಿನ ಪದರವಾದ ಸೌರ ಕರೋನಾವನ್ನು ಅಧ್ಯಯನ ಮಾಡುವುದು ಮತ್ತು ಸೂರ್ಯ-ಭೂಮಿಯ ಸಂಬಂಧದ ವಿವಿಧ ಅಂಶಗಳನ್ನು ತನಿಖೆ ಮಾಡುವುದು ಆದಿತ್ಯ ಎಲ್ 1 ಮಿಷನ್ ಪ್ರಮುಖ ಉದ್ದೇಶವಾಗಿದೆ. ಭೂಮಿ ಮತ್ತು ಸೂರ್ಯನ ನಡುವೆ ಇರುವ ಬಾಹ್ಯಾಕಾಶದಲ್ಲಿ ಸ್ಥಿರವಾದ ಬಿಂದುವಾಗಿರುವ ಮೊದಲ ಲಾಗ್ರಾಂಜಿಯನ್ ಪಾಯಿಂಟ್ ಸುತ್ತ ಹಾಲೋ ಕಕ್ಷೆಗೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಈ ಕಕ್ಷೆಯು ಭೂಮಿಯ ಅಡೆತಡೆಯಿಲ್ಲದೆ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Aditya L1 Mission: ಸೂರ್ಯ, ಚಂದ್ರನ ಚೆಂದದ ಸೆಲ್ಫಿ ಕಳುಹಿಸಿದ ಆದಿತ್ಯ ಎಲ್‌ 1; ನೀವೂ ನೋಡಿ

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ ಸೆಪ್ಟೆಂಬರ್‌ 2ರಂದು ನಭಕ್ಕೆ ಹಾರಿತು. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿತ್ತು. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸುತ್ತಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version