ನವದೆಹಲಿ: ರಾಜಕೀಯ ಪಕ್ಷಗಳು ೨೦೨೧-೨೨ನೇ ಸಾಲಿನಲ್ಲಿ ಪಡೆದ ದೇಣಿಗೆ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ನೀಡಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿಯೇ ಹೆಚ್ಚಿನ ದೇಣಿಗೆ ಪಡೆದಿದೆ. ಅದರಲ್ಲೂ, ರಾಷ್ಟ್ರೀಯ ಪಕ್ಷಗಳಿಗೆ ನೀಡಿದ ದೇಣಿಗೆಯಲ್ಲಿ (Donations To Political Parties) ಬಿಜೆಪಿ ಪಾಲು ಶೇ.೮೦ರಷ್ಟು ಇರುವುದು ಗಮನಾರ್ಹವಾಗಿದೆ.
೨೦೨೧-೨೨ನೇ ಸಾಲಿನಲ್ಲಿ ದೇಶದ ಎಂಟು ರಾಷ್ಟ್ರೀಯ ಪಕ್ಷಗಳಿಗೆ ೭೮೦ ಕೋಟಿ ರೂ. ದೇಣಿಗೆ ನೀಡಲಾಗಿದೆ. ಇದರಲ್ಲಿ ಬಹುಪಾಲು ಅಂದರೆ ೬೧೪ ಕೋಟಿ ರೂ. ಬಿಜೆಪಿಗೆ ಲಭಿಸಿದರೆ, ಕಾಂಗ್ರೆಸ್ ೯೫ ಕೋಟಿ ರೂ. ಸೆಳೆದಿದೆ. ಮೂರನೇ ಸ್ಥಾನದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವಿದ್ದು (NCP), 58 ಕೋಟಿ ರೂ. ದೇಣಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಸ್ವೀಕರಿಸಿದ ೬೧೪ ಕೋಟಿ ರೂ.ನಲ್ಲಿ ಕಾರ್ಪೊರೇಟ್ ವಲಯದ ಪಾಲು ೫೪೮ ಕೋಟಿ ರೂ. ಇದೆ.
ರಾಜಕೀಯ ಪಕ್ಷಗಳು ಚುನಾವಣೆ ಆಯೋಗಕ್ಕೆ ವಾರ್ಷಿಕವಾಗಿ ದೇಣಿಗೆ ಕುರಿತು ಸಲ್ಲಿಸುವ ಮಾಹಿತಿ ಆಧರಿಸಿ ಎಡಿಆರ್ ವರದಿ ಪ್ರಕಟಿಸುತ್ತದೆ. ಇದರಂತೆ, ಈ ಬಾರಿಯೂ ಬಿಜೆಪಿಯೇ ಹೆಚ್ಚು ದೇಣಿಗೆ ಸೆಳೆದಿದೆ. ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹವು ೩೧.೫ರಷ್ಟು ಏರಿಕೆಯಾಗಿದೆ. ಇದು ೨೦ ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ ದೇಣಿಗೆಯ ವರದಿಯಾಗಿದೆ. ಅಚ್ಚರಿಯ ಸಂಗತಿ ಎಂದರೆ, ಮಾಯಾವತಿ ನೇತೃತ್ವದ ಬಿಎಸ್‌ಪಿಗೆ ಒಬ್ಬರೂ ೨೦ ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ನೀಡಿಲ್ಲ.
ಇದನ್ನೂ ಓದಿ: Corporate Donation | 5 ವರ್ಷದಲ್ಲಿ ಗುಜರಾತ್‌ನಿಂದ ಬಿಜೆಪಿಗೆ 163 ಕೋಟಿ ರೂ. ಕಾರ್ಪೊರೇಟ್ ದೇಣಿಗೆ!