ನವದೆಹಲಿ: ಅಕ್ರಮ ಸಂಬಂಧ, ವಿವಾಹೇತರ ಸಂಬಂಧ ಅಥವಾ ವ್ಯಭಿಚಾರವನ್ನು (Adultery Criminal Crime) ಮತ್ತೆ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ (Parliamentary Panel) ಕೇಂದ್ರ ಸರ್ಕಾರಕ್ಕೆ (Central Government) ಶಿಫಾರಸು ಮಾಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮಂಡಿಸಲಾದ ಭಾರತೀಯ ನ್ಯಾಯ ಸಂಹಿತಾ ವಿಧೇಯಕಕ್ಕೆ (Bharatiya Nyay Sanhita) ಸಂಬಂಧಿಸಿದಂತೆ ಸಮಿತಿಯು ಈ ಶಿಫಾರಸುಗಳನ್ನು ಮಾಡಿದೆ. ಭಾರತೀಯ ಸಮಾಜದಲ್ಲಿ ವಿವಾಹಕ್ಕೆ ಪವಿತ್ರ ಸ್ಥಾನವಿದೆ. ಈ ಪಾವಿತ್ರ್ಯತೆಯನ್ನು ಕಾಪಾಡುವುದಕ್ಕಾಗಿ ವ್ಯಭಿಚಾರವನ್ನು ಅಥವಾ ಅಕ್ರಮ ಸಂಬಂಧವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬೇಕು ಎಂದು ಸಮಿತಿ ತಿಳಿಸಿದೆ. ಪರಿಷ್ಕೃತ ವ್ಯಭಿಚಾರ ಕಾನೂನು ಇದನ್ನು “ಲಿಂಗ-ತಟಸ್ಥ” ಅಪರಾಧ ಎಂದು ಪರಿಗಣಿಸಬೇಕು. ಅಲ್ಲದೇ ಪುರುಷ ಮತ್ತು ಮಹಿಳೆ – ಎರಡೂ ಪಕ್ಷಗಳನ್ನು ಸಮಾನ ಹೊಣೆಗಾರರನ್ನಾಗಿ ಮಾಡಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.
ಒಂದು ವೇಳೆ ಕೇಂದ್ರ ಸರ್ಕಾರವು ಸಂಸದೀಯ ಸಮಿತಿಯನ್ನು ವರದಿಯನ್ನು ಒಪ್ಪಿಕೊಂಡರೆ, ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ನಡೆಯಾಗುತ್ತದೆ. 2018ರಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಅಕ್ರಮ ಸಂಬಂಧ ಅಥವಾ ವಿವಾಹೇತರ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಹೇಳಿತ್ತು.
ಭಾರತೀಯ ನ್ಯಾಯ ಸಂಹಿತೆಯು, ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಪುರಾವೆಗಳ ಕಾಯಿದೆಯನ್ನು ಬದಲಿಸುವ ಮೂರು ಗುಂಪಿನ ಭಾಗವಾಗಿದೆ. ಇದನ್ನು ಹೆಚ್ಚಿನ ಪರಿಶೀಲನೆಗಾಗಿ ಬಿಜೆಪಿ ಸಂಸದ ಬ್ರಿಜ್ ಲಾಲ್ ನೇತೃತ್ವದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಆಗಸ್ಟ್‌ನಲ್ಲಿ ಕಳುಹಿಸಲಾಗಿತ್ತು.
ಕಾಂಗ್ರೆಸ್ ಸಂಸದ ಪಿ ಚಿದಂಬರಂ ಅವರು ಮಾತ್ರ ಭಿನ್ನ ಅಭಿಪ್ರಾಯವನ್ನು ದಾಖಲಿಸಿದ್ದಾರೆ. “… ದಂಪತಿಗಳ ಜೀವನದಲ್ಲಿ ಪ್ರವೇಶಿಸುವುದು ಸರ್ಕಾರದ ವ್ಯವಹಾರವಲ್ಲ.” ಅಲ್ಲದೇ ಅವರು ಮೂರು ಮೂಲಭೂತ ಆಕ್ಷೇಪಣೆಗಳ ಬಗ್ಗೆ ಒತ್ತಿ ಹೇಳಿದ್ದಾರೆ. ಈ ಗ ಮಂಡಿಸಲಾಗಿರುವ ಮೂರು ವಿಧೇಯಕಗಳು ಜಾರಿಯಲ್ಲಿರುವ ಕಾನೂನುಗಳು ಕಾಪಿ ಮತ್ತು ಪೇಸ್ಟ್ ಆಗಿವೆ ಎಂದು ಅವರು ಹೇಳಿದ್ದಾರೆ. ಆ ಮೂಲಕ ಹೊಸ ಸಂಹಿತೆಯಲ್ಲಿ ಹೊಸ ಪ್ರಸ್ತಾಪಗಳಿಲ್ಲ. ಈಗಾಗಲೇ ಜಾರಿಯಲ್ಲಿರುವ ಕಾನೂನುಗಳನ್ನು ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
2018 ರಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ವ್ಯಭಿಚಾರವು ಡಿವೋರ್ಸ್‌ಗೆ ದಾರಿ ಮಾಡಿಕೊಡುವ ನಾಗರಿಕ ಅಪರಾಧ ಎನಿಸಿಕೊಳ್ಳಬಹುದೇ ಹೊರದು ಕ್ರಿಮಿನಲ್ ಅಪರಾಧವಾಗಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆ ಮೂಲಕ 163 ವರ್ಷ ಹಳೆಯದಾದ, ವಸಾಹತುಶಾಹಿ ಯುಗದ ಕಾನೂನು “ಪತಿ ಪತ್ನಿಯ ಯಜಮಾನ” ಎಂಬ ಅಮಾನ್ಯ ಪರಿಕಲ್ಪನೆಯನ್ನು ಅನುಸರಿಸಿದೆ ಎಂದು ನ್ಯಾಯಾಲಯವು ಹೇಳಿತ್ತು.
2018ರ ಸುಪ್ರೀಂ ಕೋರ್ಟ್ ತೀರ್ಪಿನ ಮುಂಚೆ, ವ್ಯಕ್ತಿಯೊಬ್ಬ, ಮಹಿಳೆಯೊಬ್ಬಳ ಗಂಡನ ಒಪ್ಪಿಗೆ ಇಲ್ಲದೇ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದರು ಅದು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಅಪರಾಧ ಸಾಬೀತಾದರೆ ಐದು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದಾಗಿತ್ತು. ಆದರೆ, ಮಹಿಳೆಗೆ ಯಾವುದೇ ಶಿಕ್ಷೆ ನೀಡಲು ಅವಕಾಶ ಇರಲಿಲ್ಲ. ಆದರೆ, ಈಗ ಸಂಸದೀಯ ಸ್ಥಾಯಿ ಸಮಿತಿಯು ಈ ಕಾನೂನನ್ನು ಮರಳಿ ಜಾರಿಗೆ ತರಬೇಕು ಎಂದು ಹೇಳಿದ್ದು ಮಾತ್ರವಲ್ಲದೇ, ಅಪರಾಧಕ್ಕೆ ಪುರುಷ ಮತ್ತು ಮಹಿಳೆ ಇಬ್ಬರನ್ನು ಸಮಾನ ಹೊಣೆಗಾರರನ್ನಾಗಿ ಮಾಡಬೇಕು ಎಂದು ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರವು ಸಮಿತಿಯ ವರದಿಯನ್ನು ಒಪ್ಪಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕು.
ಈ ಸುದ್ದಿಯನ್ನೂ ಓದಿ: Illicit relationship : ಹೆಂಡತಿಗೆ ಅಕ್ರಮ ಸಂಬಂಧವಿದ್ದರೆ ಜೀವನಾಂಶ ಕೊಡಬೇಕಿಲ್ಲ ಎಂದ ಹೈಕೋರ್ಟ್