ಕಾಶಿ ಅಥವಾ ವಾರಣಾಸಿ ಎಂದರೆ ಅದೊಂದು ಆಧ್ಯಾತ್ಮದ ತಾಣ, ಇಲ್ಲಿಗೆ ಹೋಗುವುದು ಕೇವಲ ವಿಶ್ವನಾಥನ ದರ್ಶನಕ್ಕೆ ಹಾಗೂ ಗಂಗೆಯಲ್ಲಿ ಮುಳುಗಿ ಎದ್ದು ಸಕಲ ಪಾಪಗಳನ್ನೂ ತೊಳೆಯುವುದಕ್ಕೆ ಎಂಬ ಯೋಚನೆ ಮಾತ್ರ ನೀವು ಮಾಡಿದ್ದರೆ ಅದು ಖಂಡಿತಾ ಪೂರ್ತಿ ನಿಜವಲ್ಲ. ಜೀವನದಲ್ಲಿ ಒಮ್ಮೆಯಾದರೂ ಕಾಶಿಯನ್ನು ನೋಡಲೇಬೇಕು ಎನ್ನುವುದಕ್ಕೆ ಕಾರಣ ಕೇವಲ ಇದೊಂದಲ್ಲ. ಕಾಶಿ ಎಂಬುದು ಭಾರತದ ಅತ್ಯಂತ ಪ್ರಾಚೀನ ನಗರಿ, ಪರಶಿವನೇ ಕಟ್ಟಿದ ನಗರಿ ಎಂಬ ಪೌರಾಣಿಕ ಹಿನ್ನೆಲೆಯ ಜೊತೆಗೆ, ಕಾಶಿಯಲ್ಲಿ ಕಾಣಬಹುದಾದ ಜೀವನದರ್ಶನದಿಂದಾಗಿಯೋ ಏನೋ ಇಂದು ವಿದೇಶೀಯರೂ ಸೇರಿದಂತೆ ಯುವಜನರನ್ನೂ ತನ್ನೆಡೆಗೆ ಸೆಳೆಯುವ ತಾಕತ್ತು ಕಾಶಿಗಿದೆ ಎಂಬುದೂ ನಿಜವೇ. ಕಾಶಿ ತೋರಿಸುವ ಪ್ರವಾಸದ ಅನುಭವವೇ ಭಿನ್ನ.
ಇಂತಹ ಕಾಶಿ ಇತ್ತೀಚೆಗಿನ ಒಂದೆರಡು ವರ್ಷಗಳಿಂದ ಸಾಹಸೀಪ್ರಿಯ ಪ್ರವಾಸಿಗರಿಗೆ ಇನ್ನೊಂದು ಜಗತ್ತನ್ನೂ ತೋರಿಸುತ್ತಿದೆ. ಕಾಶಿಯ ಪಾಲಿಗೆ ಇದು ವಿಶೇಷ. ಹಾಟ್ ಏರ್ ಬಲೂನಿಂಗ್ ಉತ್ಸವ ಕಾಶಿಯಲ್ಲಿ ಇದೇ ಜನವರಿ ೧೭ರಿಂದ ೨೦ರವರೆಗೆ ʻಕಾಶಿ ಬಲೂನ್ ಹಾಗೂ ಬೋಟ್ ಫೆಸ್ಟಿವಲ್ʼ ಹೆಸರಿನಿಂದ ನಡೆಯುತ್ತಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಈ ಉತ್ಸವವನ್ನು ಆಯೋಜಿಸಿದ್ದು, ಪ್ರವಾಸಿಗರ ಪಾಲಿಗೊಂದು ಹೊಸ ಆಕರ್ಷಣೆಯಾಗಿದೆ.
ಈ ಉತ್ಸವ ೨೦೨೩ರ ಅತ್ಯಂತ ಸಾಹಸೀ ಉತ್ಸವವಾಗಿದ್ದು, ಇದರಲ್ಲಿ ಬೋಟ್ ರೇಸ್ ಹಾಗೂ ಹಾಟ್ ಏರ್ ಬಲೂನಿಂಗ್ ಎರಡೂ ನಡೆಯಲಿವೆ. ಮಹಿ ಜನಾಂಗದ ಕುಲಕಸುಬಿಗರಾದ ಸ್ಥಳೀಯ ದೋಣಿ ನಡೆಸುವ ಮಂದಿಯ ೧೨ ತಂಡಗಳು ಈ ಬೋಟ್ ರೇಸ್‌ನಲ್ಲಿ ಭಾಗವಹಿಸಲಿದ್ದು ಇದು ಅತ್ಯಂತ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ. ನಾವಿಕ್ ಸೇನಾ, ಕಾಶಿ ಲಹಿರಿ, ಜಲ ಯೋಧಾಸ್, ಕಾಶಿ ಕೀಪರ್ಸ್, ಗಂಗಾ ಲಹಿರಿ, ನೌಕಾ ರೈಡರ್ಸ್, ಗಂಗಾ ವಾಹಿನಿ, ಭಾಗೀರಥಿ ಸೇವಕ್ಸ್, ಹೌಮುಖ್ ಜೈಂಟ್ಸ್ ಹಾಗೂ ಘಾಟ್ ಕೀಪರ್ಸ್ ಹೆಸರಿನ ಹನ್ನೆರಡು ತಂಡಗಳು ಬೋಟ್ ರೇಸ್‌ನಲ್ಲಿ ಭಾಗವಹಿಸುತ್ತಿವೆ. ಕಾಶಿಯ ಪ್ರಮುಖ ಘಾಟ್ ಆಗಿರುವ ದಶಾಶ್ವಮೇಧ ಘಾಟ್‌ನಿಂದ ರಾಜ್ ಘಾಟ್‌ವರೆಗೆ ಈ ರೇಸ್ ನಡೆಯಲಿದ್ದು ಕಾಶಿ ವಿಶ್ವನಾಥ ಧಾಮ, ಮೆಹ್ತಾ ಘಾಟ್ ಹಾಗೂ ಪಂಚಗಂಗಾ ಘಾಟ್‌ಗಳ ಮೂಲಕ ದೋಣಿಗಳು ಹಾದುಹೋಗಲಿವೆ.
ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಮಂದಿ ಜೊತೆ ಸೇರಿಕೊಂಡು ಮಾಡುವ ಈ ಉತ್ಸವ ಈ ಬಾರಿ ಹೆಚ್ಚು ವೃತ್ತಿಪರವಾಗಿ ನಡೆಯಲಿದ್ದು ಈಗಾಗಲೇ ತಯಾರಿ ಆರಂಭವಾಗಿದೆ.
ಹಾಟ್ ಏರ್ ಬಲೂನಿಂಗ್ ಉತ್ಸವಕ್ಕಾಗಿ ಐದು ದೇಶಗಳ ಹಾಗೂ ಭಾರತದ ೧೨ ವಿವಿಧ ಜಾಗಗಳ ವೃತ್ತಿಪರ ಹಾಟ್ ಏರ್ ಬಲೂನಿಂಗ್ ಮಾಡುವ ಮಂದಿಯ ಹಾಗೂ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇದೊಂದು ದೊಡ್ಡ ಉತ್ಸವವಾಗಿ ಹೊರಹೊಮ್ಮಲಿದೆ. ಅಮೆರಿಕಾದ ಪ್ರತಿಷ್ಠಿತ ಹಾಗೂ ಸಾಕಷ್ಟು ಪರಿಣಿತ ಸಂಸ್ಥೆಗಳೂ ಇದರಲ್ಲಿ ಭಾಗವಹಿಸುತ್ತಿವೆ.
ಇದನ್ನೂ ಓದಿ | Startup Story | ಬೆಂಗಳೂರಿನ ʼಹೂವುʼ | ಅಕ್ಕತಂಗಿಯರ ವಿನೂತನ ಸ್ಟಾರ್ಟಪ್ ಯಶೋಗಾಥೆ!
ಹಾಟ್ ಏರ್ ಬಲೂನ್ ಉತ್ಸವ ಸೆಂಟ್ರಲ್ ಹಿಂದೂ ಬಾಯಸ್ ಸ್ಕೂಲ್, ರಾಮನಗರ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಗಳಲ್ಲಿ ನಡೆಯಲಿದೆ. ಬಲೂನ್‌ಯಾತ್ರೆ ಮಾಡಬಯಸಿದ ಪ್ರತಿಯೊಬ್ಬನಿಗೆ ಈ ಹಿಂದೆ ೫೦೦ ರೂಗಳ ಟಿಕೆಟ್ ನಿಗದಿಪಡಿಸಲಾಗಿತ್ತು. ಈ ವರ್ಷದ ದರ ಇನ್ನೂ ನಿಗದಿಯಾಗಬೇಕಿದೆ.
ಉತ್ತರಪ್ರದೇಶ ಪ್ರವಾಸೋದ್ಯಮ ಇದೇ ಎರಡನೇ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಉತ್ಸವ ಹಮ್ಮಿಕೊಳ್ಳುತ್ತಿದ್ದು, ಈ ಹಿಂದೆ ೨೦೨೧ರಲ್ಲಿ ಇದು ನಡೆದಿತ್ತು. ೨೦೨೧ರ ಈ ಉತ್ಸವದಲ್ಲಿ ಸುಮಾರು ಎಂಟು ಮಂದಿ ವಿದೇಶೀ ಪೈಲಟ್‌ಗಳು ಈ ಉತ್ಸವಕ್ಕೆ ವಿಶೇಷವಾಗಿ ಕರೆಸಿಕೊಳ್ಳಲಾಗಿತ್ತು.
ಬೋಟ್ ರೇಸ್ ಈ ಬಾರಿಯ ಹೊಸ ಆಕರ್ಷಣೆಯಾಗಿದ್ದು, ರಾಜ್ಯ ಮಟ್ಟದಲ್ಲಿ ಇದೇ ಮೊದಲಬಾರಿಗೆ ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಹಿಂದೆ ಕೇವಲ ತಮ್ಮೊಳಗೆ ವಿನೋದಕ್ಕಾಗಿ ಕಾಶಿಯ ಅಂಬಿಗರು ಇಂತಸ ಸಣ್ಣಪುಟ್ಟ ರೇಸ್‌ಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ | Viral Video | ಐಷಾರಾಮಿ ಕಾರು ಬಿಟ್ಟು ಸೈಕಲ್ ಹತ್ತಿದ ಫ್ರಾನ್ಸ್ ಅಧ್ಯಕ್ಷ, ಡೆನ್ಮಾರ್ಕ್ ಪ್ರಧಾನಿ, ವಿಡಿಯೊ ಈಗ ವೈರಲ್