ನವ ದೆಹಲಿ: ಇಲ್ಲಿನ ಮೆಹ್ರೌಲಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್ ಕೊಲೆ ಕೇಸ್ ತನಿಖೆ ಮುಂದುವರಿಸಿದಷ್ಟೂ ಒಂದೊಂದೇ ವಿಷಯಗಳು ಹೊರಬೀಳುತ್ತಿವೆ. ಆಕೆಯನ್ನು ಹತ್ಯೆ ಮಾಡಿ, 35 ಪೀಸ್ಗಳನ್ನಾಗಿ ಮಾಡಿ ಫ್ರಿಜ್ನಲ್ಲಿಟ್ಟ ವಿಕೃತ ಹಂತಕ ಅಫ್ತಾಬ್ ಪೂನಾವಾಲಾ, ಬಳಿಕ ಆಕೆಯ ದೇಹ ವಾಸನೆ ಬಾರದಂತೆ ತಡೆಯಲು ಏನೆನೆಲ್ಲ ಪ್ರಯತ್ನ ಪಟ್ಟ ಎಂಬುದನ್ನು ಈಗಾಗಲೇ ಪೊಲೀಸರು ಹೇಳಿದ್ದಾರೆ. ಆತ ಶ್ರದ್ಧಾಳನ್ನು ಕೊಲೆ ಮಾಡಿದಾಗಿನಿಂದಲೂ ಯಥೇಚ್ಛವಾಗಿ ನೀರಿನ ಬಳಕೆ ಮಾಡುತ್ತಿದ್ದ ಎಂಬ ಹೊಸ ಮಾಹಿತಿಯನ್ನು ಈಗ ಪೊಲೀಸರು ಬಿಚ್ಚಿಟ್ಟಿದ್ದಾರೆ.
ದೆಹಲಿಯಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆ 20 ಸಾವಿರ ಲೀಟರ್ ನೀರು ಉಚಿತ. ಅದಕ್ಕಿಂತಲೂ ಹೆಚ್ಚಾಗಿ ಬಳಕೆ ಮಾಡಿದರೆ ಮಾತ್ರ ಅವರಿಗೆ ನೀರಿನ ಬಿಲ್ ಬರುತ್ತದೆ. ಆತನ ಫ್ಲ್ಯಾಟ್ನಲ್ಲಿ ಕುಟುಂಬ ಸಮೇತ ಇದ್ದವರಿಗೂ ಇಷ್ಟು ಪ್ರಮಾಣದ ನೀರು ತಿಂಗಳಿಗೆ ಸಾಕಾಗುತ್ತಿತ್ತು. ಆದರೆ ಶ್ರದ್ಧಾಳನ್ನು ಕೊಂದ ಬಳಿಕ ಒಬ್ಬನೇ ಇದ್ದ ಅಫ್ತಾಬ್ಗೆ ತಿಂಗಳಿಗೆ 20 ಸಾವಿರ ಲೀಟರ್ಗೂ ಅಧಿಕ ನೀರು ಬೇಕಾಗಿತ್ತು. ಆತ ಫ್ರಿಜ್ನಲ್ಲಿಟ್ಟಿದ್ದ ಪೀಸ್ಗಳನ್ನು ಎಸೆಯುವಾಗ ಬ್ಯಾಗ್ನಲ್ಲಿ ತುಂಬುವಾಗ ಇನ್ನಷ್ಟು ಚಿಕ್ಕದಾಗಿ ತುಂಡರಿಸುತ್ತಿದ್ದ. ಆ ಶಬ್ದ ಕೇಳಬಾರದು ಎಂಬ ಕಾರಣಕ್ಕೆ ನೀರಿನ ನಲ್ಲಿಯನ್ನು ಆನ್ ಮಾಡಿ ಇಡುತ್ತಿದ್ದ. ನೀರಿನ ಶಬ್ದ ದೊಡ್ಡದಾಗಿ ಕೇಳಿದರೆ, ಮೃತ ದೇಹ ಕತ್ತರಿಸುವ ಶಬ್ದ ಕೇಳೋದಿಲ್ಲ ಎಂಬ ಮುನ್ನೆಚ್ಚರಿಕೆ ಅವನದಾಗಿತ್ತು. ಇನ್ನು ಶ್ರದ್ಧಾಳ ತುಂಡಾದ ದೇಹಗಳನ್ನು ತೊಳೆಯಲು ಯಥೇಚ್ಛವಾಗಿ ಬಿಸಿ ನೀರು ಬಳಸುತ್ತಿದ್ದ, ರಾಸಾಯನಿಕಗಳನ್ನು ಮಿಶ್ರಣ ಮಾಡಿಕೊಳ್ಳಲೂ ಅವನಿಗೆ ಹೆಚ್ಚುವರಿ ನೀರು ಬೇಕಾಗಿತ್ತು. ಅಷ್ಟೇ ಅಲ್ಲ, ಹತ್ಯೆ ನಡೆದ ಬಳಿಕ ಫ್ಲ್ಯಾಟ್ನ್ನು ಸ್ವಚ್ಛಗೊಳಿಸಲು ವಿಪರೀತ ಎನ್ನುವಷ್ಟು ನೀರು ಖಾಲಿ ಮಾಡಿದ್ದ. ಒಟ್ಟಾರೆ ತಿಂಗಳಿಗೆ ಅವನಿಗೆ 20 ಸಾವಿರ ಲೀಟರ್ಗೂ ಅಧಿಕ ನೀರು ಬೇಕಾಗಿತ್ತು. ಇದರಿಂದಾಗಿ ಅಫ್ತಾಬ್ 300 ರೂಪಾಯಿ ನೀರಿನ ಬಿಲ್ ಪಾವತಿಸುವುದು ಇನ್ನೂ ಬಾಕಿ ಇದೆ ಎಂಬುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಅವನ ನೀರಿನ ಬಿಲ್ನ್ನೂ ಕೂಡ ಪೊಲೀಸರು ಈ ಕೇಸ್ನ ಪುರಾವೆಯನ್ನಾಗಿ ಪರಿಗಣಿಸಿದ್ದಾರೆ.
ಶ್ರದ್ಧಾಳನ್ನು ಅಫ್ತಾಬ್ ಮೇ ತಿಂಗಳಲ್ಲಿ ಹತ್ಯೆ ಮಾಡಿದ್ದಾನೆ. ಆದರೆ ಈಗ ಶ್ರದ್ಧಾಳ ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗಲೇ ಆಕೆಯ ಹತ್ಯೆಯಾಗಿದ್ದು ಬೆಳಕಿಗೆ ಬಂದಿದೆ. ಆದರೆ ಅದು ಅಂತಿಂಥಾ ಹತ್ಯೆಯಲ್ಲ, ದೇಶವನ್ನೇ ನಡುಗಿಸಿದ ಭಯಾನಕ ಹತ್ಯೆ ಎಂಬ ಸತ್ಯವೂ ಗೊತ್ತಾಗಿದೆ. ಕೊಲೆಯಾಗಿ ಆರು ತಿಂಗಳೇ ಕಳೆದು ಹೋಗಿರುವುದರಿಂದ ಸಾಕ್ಷಿ ಸಂಗ್ರಹಣೆಯೂ ಕಷ್ಟವಾಗಿದೆ. ಈ ಮಧ್ಯೆ ಮೆಹ್ರೌಲಿ ಬಳಿಯ ಅರಣ್ಯ ಪ್ರದೇಶದ ಸಮೀಪ ಇದ್ದ ಸಿಸಿಟಿವಿ ಕ್ಯಾಮರಾದ ಫೂಟೇಜ್ ಸಿಕ್ಕಿದ್ದು, ಅದರಲ್ಲಿ ಅಫ್ತಾಬ್ಗೆ ಸಂಬಂಧಪಟ್ಟ ಮಹತ್ವದ ದಾಖಲೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Delhi Crime | ವಿಕೃತ ಹಂತಕ ಅಫ್ತಾಬ್ ನಾರ್ಕೊ ಟೆಸ್ಟ್‌ಗೆ ಕೋರ್ಟ್ ಅಸ್ತು, ಏನಿದು ಪರೀಕ್ಷೆ?