ಹೊಸದಿಲ್ಲಿ: ಭಾರತೀಯ ಸೇನೆ ಎರಡು ವರ್ಷಗಳ ಬಳಿಕ ನೇಮಕಾತಿ ರ‍್ಯಾಲಿ ಪುನರಾರಂಭಿಸುವ ಸಾಧ್ಯತೆ ಇದೆ. ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸೇನಾ ನೇಮಕಾತಿ ರ‍್ಯಾಲಿಗಳನ್ನು ನಡೆಸಲಾಗಿರಲಿಲ್ಲ.
ಸೇನಾ ನೇಮಕಾತಿ ರ‍್ಯಾಲಿಗಳ ವೇಳಾಪಟ್ಟಿ ಇನ್ನೂ ಅಂತಿಮವಾಗಿಲ್ಲ. ಅದರ ಪ್ರಕ್ರಿಯೆ ನಡೆಯುತ್ತಿದ್ದು, ಆಗಸ್ಟ್ ನಿಂದ ಡಿಸೆಂಬ್ ಅವಧಿಯಲ್ಲಿ ದೇಶಾದ್ಯಂತ ನೇಮಕಾತಿ ರ‍್ಯಾಲಿ ನಡೆಯುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ನೇಮಕಾತಿ ಇರದಿದ್ದುದರಿಂದ ಸೇನೆಯಲ್ಲಿ ಸೈನಿಕರ ಕೊರತೆ ಉಂಟಾಗಿತ್ತು. ಆದರೆ ಇದರಿಂದ ಸೇನೆಯ ಚಟುವಟಿಕೆಗಳಿಗೆ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಮಕಾತಿ ರ‍್ಯಾಲಿ ಕುರಿತ ಪೂರ್ವಸಿದ್ಧತೆ ನಡೆಯುತ್ತಿದೆ. ಹೊಸ ನೇಮಕಾತಿ ನೀತಿಯೂ ಜಾರಿಯಾಗಲಿದೆ. ಸೇನೆಯ ಪಿಬಿಒಆರ್ ಕೇಡರ್ ನಲ್ಲಿ 125,000 ಸೈನಿಕರ ಕೊರತೆ ಇದೆ. ಪ್ರತಿ ತಿಂಗಳು ಸರಾಸರಿ 5,000 ಲೆಕ್ಕದಲ್ಲಿ ಕೊರತೆ ಉಂಟಾಗುತ್ತಿದೆ.
ಹೊಸ ನೇಮಕಾತಿ ನೀತಿಯ ಅಡಿಯಲ್ಲಿ ಮೂರು-ಐದು ವರ್ಷಗಳ ಸೀಮಿತ ಅವಧಿಗೆ ಸೈನಿಕರ ನೇಮಕಾತಿ ನಡೆಯಲಿದೆ. ಈ ನೀತಿಯ ವಿವರಗಳು ಪ್ರಕಟವಾಗಬೇಕಾಗಿದೆ.
ಇದನ್ನೂ ಓದಿ | ಸೇನೆಯ NO.2 ಸ್ಥಾನದಲ್ಲಿ ಕನ್ನಡಿಗ: ಉಪ ಮುಖ್ಯಸ್ಥರಾಗಿ ಲೆ.ಜ. ರಾಜು