Site icon Vistara News

Cinema hall | 30 ವರ್ಷದ ಬಳಿಕ ಕಾಶ್ಮೀರದಲ್ಲಿ ಸಿನಿಮಾ ಹಾಲ್!

Cinema Hall

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡ ಬಳಿಕ ಆ ರಾಜ್ಯದಲ್ಲಿ ಹೊಸ ಬದಲಾವಣೆಗಳಾಗುತ್ತಿವೆ. ಇದರ ಸಾಲಿಗೆ ಈಗ ಹೊಸ ಚಿತ್ರಮಂದಿರಗಳ ಆರಂಭ ಕೂಡ ಸೇರಿದೆ. ಸುಮಾರು 30 ವರ್ಷಗಳ ಬಳಿಕ ಪುಲ್ವಾಮಾ ಮತ್ತು ಶೋಪಿಯಾನ್‌ದಲ್ಲಿ ಚಿತ್ರಮಂದರಿಗಳು (Cinema hall) ಓಪನ್ ಆಗಿವೆ! ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಸಿನಿಮಾ ಹಾಲ್‌ಗಳಿಗೆ ಚಾಲನೆ ನೀಡಿದರು.

ಸಿನಿಮಾ ಹಾಲ್‌ಗೆ ಚಾಲನೆ ನೀಡಿದ ಫೋಟೋಗಳನ್ನು ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿಕೊಂಡಿದ್ದು, ಕಣಿವೆ ರಾಜ್ಯಕ್ಕೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದಾರೆ. ಸಿನಿಮಾ ಪ್ರದರ್ಶನ, ಇನ್ಫೋಟೈನ್ಮೆಂಟ್ ಸೇರಿದಂತೆ ಅನೇಕ ಕಾರ್ಯಕ್ಕಾಗಿ ಈ ಬಹುದ್ದೇಶ ಸಿನಿಮಾ ಹಾಲ್‌ ಬಳಕೆಯಾಗಲಿದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

1990ರಲ್ಲಿ ಕಣಿವೆ ರಾಜ್ಯ ಭಾರೀ ಉಗ್ರ ಚಟುವಟಿಕೆಗಳಿಗೆ ಸಾಕ್ಷಿಯಾಗಿತ್ತು. ಆಗಿನ ಸಂದರ್ಭದಲ್ಲಿ ಮುಚ್ಚಲಾಗಿದ್ದ ಸಿನಿಮಾ ಹಾಲ್‌ಗಳು ಈವರೆಗೂ ಓಪನ್ ಆಗಿರಲಿಲ್ಲ. ಅಂದರೆ ಸುಮಾರು 3 ದಶಕಗಳ ಬಳಿಕ ಚಿತ್ರಮಂದಿರಗಳು ತಮ್ಮ ಬಾಗಿಲು ತೆರೆದಿವೆ.

ಮಲ್ಟಿಫ್ಲೆಕ್ಸ್ ಅನ್ನು INOX ವಿನ್ಯಾಸಗೊಳಿಸಿದೆ. ಕಾಶ್ಮೀರದ ಕರಕುಶಲ ಕಲೆಗಳಾದ ಖತಂಬಂದ ಮತ್ತು ಪೇಪಿಯರ್ ಮಾಚೆಯನ್ನು ವಿನ್ಯಾಸಕ್ಕೆ ಬಳಸಿಕೊಳ್ಳಲಾಗಿದೆ. ಫುಡ್ ಕೋರ್ಟ್ ಕೂಡ ರೂಪಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಕಣಿವೆ ರಾಜ್ಯದಲ್ಲೂ ಯುವಕರು ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆದರೆ, ಆಧುನಿಕ ಮನರಂಜನಾ ಸೌಲಭ್ಯಗಳಿಲ್ಲದೇ 30 ವರ್ಷಗಳು ಕಳೆದಿವೆ. ಹಾಗಾಗಿ, ನಾವು ಈ ಮಲ್ಟಿಫ್ಲೆಕ್ಸ್ ಶುರು ಮಾಡಿದೆವು. ಜಮ್ಮು ಅಥವಾ ದೇಶದ ಇತರ ಯಾವುದೇ ನಗರಗಳಲ್ಲಿ ಯುವಕರ ಪಡೆಯುವ ಆಧುನಿಕ ಮನರಂಜನೆಯನ್ನು ಕಾಶ್ಮೀರದ ಯುವಕರೂ ಪಡೆದುಕೊಳ್ಳಬೇಕು ಎಂದು ಪ್ರಾಜೆಕ್ಟ್ ಚೇರ್ಮನ್ ವಿಜಯ್ ಧಾರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್​

Exit mobile version