ನವ ದೆಹಲಿ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆಯ ಅವರನ್ನು ಚುನಾವಣಾ ಪ್ರಚಾರದ ವೇಳೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯ ಹಿನ್ನೆಲೆಯಲ್ಲಿ ದೇಶದಲ್ಲೂ VVIP ಭದ್ರತೆ ವಿಚಾರದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಎಲ್ಲಾ ಭದ್ರತಾ ಏಜೆನ್ಸಿಗಳಿಗೆ ಈ ಬಗ್ಗೆ ಪತ್ರವನ್ನು ಬರೆದಿದೆ. ಭದ್ರತಾ ಏಜೆನ್ಸಿಗಳು ಗಣ್ಯರ ಭದ್ರತೆ ವಿಷಯದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮುಖ್ಯವಾಗಿ ಗಣ್ಯರು ಭಾಗವಹಿಸುವ ಕಾರ್ಯಕ್ರಮದ ವೇದಿಕೆಯ ಹಿಂಭಾಗದ ಮೇಲೆ ನಿಗಾ ಇಟ್ಟಿರಬೇಕು ಎಂದು ಸೂಚಿಸಲಾಗಿದೆ.
ಕಳೆದ ಜುಲೈ ೮ರಂದು ಜಪಾನ್‌ನ ನಾರಾ ನಗರದ ಬೀದಿಯೊಂದರಲ್ಲಿ ಶಿಂಜೊ ಅಬೆ ಅವರು ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಟೆಟ್ಸುಯಾ ಯಮಗಾಮಿ ಎಂಬ ೪೧ ವರ್ಷದ ಮಾಜಿ ಯೋಧ ಹೋಮ್ ಮೇಡ್ ಗನ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತದ ಗೃಹ ಸಚಿವಾಲಯ, ಕೇಂದ್ರ ಗುಪ್ತಚರ ಇಲಾಖೆ ಮತ್ತು ಭದ್ರತಾ ಏಜೆನ್ಸಿಗಳು ವಿವಿಐಪಿ ಭದ್ರತೆಯಲ್ಲಿರುವ ಲೋಪದೋಷಗಳ ಬಗ್ಗೆ ಚರ್ಚಿಸಿದ್ದವು. ಈ ಬಗ್ಗೆ ಎಲ್ಲ ಸಂಬಂಧಿತರಿಗೆ ಮಾರ್ಗದರ್ಶಿ ಸೂಚನೆಗಳನ್ನು ಕಳುಹಿಸಲು ನಿರ್ಧರಿಸಲಾಗಿತ್ತು.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕೇಂದ್ರೀಯ ಕೈಗಾರಿಕಾ ಭದ್ರತಾ ದಳ (ಸಿಐಎಸ್‌ಎಫ್) ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ನೂರಾರು ಗಣ್ಯ ವ್ಯಕ್ತಿಗಳ ಭದ್ರತೆಯನ್ನು ನೋಡಿಕೊಳ್ಳುತ್ತಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಎಲೈಟ್ ಎಸ್‌ಪಿಜಿ ನೋಡಿಕೊಳ್ಳುತ್ತದೆ. ಈ ಎಲ್ಲ ಭದ್ರತಾ ವಿಭಾಗಗಳಿಗೆ ಜುಲೈ ೮ರಂದೇ ಸೂಚನೆ ನೀಡಿ ಹೆಚ್ಚಿನ ಎಚ್ಚರ ವಹಿಸಲು ಸೂಚಿಸಲಾಗಿತ್ತು.
ಗಣ್ಯರ ಹಿಂದೆಯೂ ಕಣ್ಣಿರಲಿ
ಈ ಬಾರಿಯ ಮಾರ್ಗಸೂಚಿಯಲ್ಲಿ ಗಣ್ಯರ ಹಿಂಬದಿಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ. ಹಲವು ಹಂತಗಳ ಭದ್ರತಾ ಏರ್ಪಾಡುಗಳನ್ನು ಮಾಡಬೇಕು, ಕಾರ್ಯಕ್ರಮದ ಪ್ರವೇಶ ದ್ವಾರಗಳಲ್ಲಿ ಇನ್ನಷ್ಟು ಕಠಿಣ ನಿರ್ಬಂಧ, ಕಣ್ಗಾವಲನ್ನು ಇಡಬೇಕು, ಗುಂಪು ನಿಯಂತ್ರಣಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಇರಬೇಕು, ವಿವಿಐಪಿಗಳ ಆಸುಪಾಸಿನ ಭಾಗದಲ್ಲಿ ಅತಿ ಹೆಚ್ಚು ಎಚ್ಚರಿಕೆ ಇಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: ಶಿಂಜೊ ಅಬೆಯಂತೆಯೇ ಹತ್ಯೆಯಾದ ಜಗತ್ತಿನ ಹತ್ತು ನಾಯಕರಿವರು