ಪಟನಾ: ಬಿಹಾರದ ಸರನ್ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವಿಸಿ ೫೦ಕ್ಕೂ ಅಧಿಕ ಜನ ಮೃತಪಟ್ಟ ಪ್ರಕರಣ (Bihar Hooch Tragedy) ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಸಿವಾನ್ ಜಿಲ್ಲೆಯಲ್ಲಿಯೂ ಇಂತಹದ್ದೇ ದುರಂತ ಸಂಭವಿಸಿದೆ. ಸರನ್ ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ಕುಡಿದು ನಾಲ್ವರು ಮೃತಪಟ್ಟಿದ್ದಾರೆ.
ಕಳ್ಳಬಟ್ಟಿ ಸೇವಿಸಿ ನಾಲ್ವರು ಮೃತಪಟ್ಟರೆ, ಹಲವರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಕಳ್ಳಬಟ್ಟಿ ಸೇವಿಸಿದವರ ಕುರಿತು ಅಧಿಕಾರಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಛಾಪ್ರಾ ದುರಂತದಲ್ಲಿ ಮೃತರ ಸಂಖ್ಯೆ ೫೩
ಸರನ್ ಜಿಲ್ಲೆ ಛಾಪ್ರಾ ಪ್ರದೇಶದಲ್ಲಿ ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ ೫೩ಕ್ಕೆ ಏರಿಕೆಯಾಗಿದೆ. ಇನ್ನು, ರಾಜ್ಯದ ಹಲವೆಡೆ ಕಳ್ಳಬಟ್ಟಿ ಸೇವಿಸಿ ನಾಗರಿಕರು ಮೃತಪಡುತ್ತಿರುವ ಕುರಿತು ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಛಾಪ್ರಾ ದುರಂತದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ.
ಕುಡಿದವರು ಸಾಯ್ತಾರೆ ಎಂದ ನಿತೀಶ್
ಬಿಹಾರದ ಕಳ್ಳಬಟ್ಟಿ ದುರಂತಗಳ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, “ಯಾರು ಕಳ್ಳಬಟ್ಟಿ ಸೇವಿಸುತ್ತಾರೋ, ಅವರು ಸಾಯುತ್ತಾರೆ (Jo Piyega, Woh Marega)” ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. “ರಾಜ್ಯದಲ್ಲಿ ಸಾರಾಯಿ ನಿಷೇಧಿಸಲಾಗಿದೆ. ಕಳ್ಳಬಟ್ಟಿ ನಿಯಂತ್ರಣಕ್ಕೆ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಕೆಲವರು ತಪ್ಪು ಹೆಜ್ಜೆ ಇಡುತ್ತಿದ್ದಾರೆ” ಎಂದಿದ್ದಾರೆ. ಇದಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಿತೀಶ್ ಕುಮಾರ್ ಅವರು ಕ್ರಮ ತೆಗೆದುಕೊಳ್ಳುವ ಬದಲು ಉಡಾಫೆಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿವೆ.
ಇದನ್ನೂ ಓದಿ | Bihar Hooch Tragedy | ಕಳ್ಳಬಟ್ಟಿ ಸೇವಿಸಿ 20 ಜನ ಸಾವು, ಕುಡಿದು ಅಸ್ವಸ್ಥರಾದವರಿಗಾಗಿ ಶೋಧ