ಲಖನೌ: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಕಾರಿನ ಅಡಿಗೆ ಸಿಲುಕಿದ 20 ವರ್ಷದ ಯುವತಿಯನ್ನು 12 ಕಿ.ಮೀ ಎಳೆದ ಪರಿಣಾಮ ಆಕೆ ದಾರುಣವಾಗಿ ಮೃತಪಟ್ಟ ಪ್ರಕರಣ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಇಂತಹದ್ದೇ ಪ್ರಕರಣ ಸುದ್ದಿಯಾಗಿದೆ. ಸೈಕಲ್ ಹತ್ತಿ ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿದ್ದು, ಆಗ ಕಾರಿನ ಹಿಂಬದಿಗೆ ಸಿಲುಕಿದ ಬಾಲಕನನ್ನು 1 ಕಿ.ಮೀ (Car Drags Boy) ಎಳೆಯಲಾಗಿದೆ. ಈ ಕುರಿತ ವಿಡಿಯೊ ಈಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರು 9ನೇ ತರಗತಿ ಓದುತ್ತಿರುವ ಕೇತನ್ ಕುಮಾರ್ (15) ಎಂಬ ವಿದ್ಯಾರ್ಥಿಗೆ ಡಿಕ್ಕಿಯಾಗಿದೆ. ಇದಾದ ಬಳಿಕ ವಿದ್ಯಾರ್ಥಿಯು ಕಾರಿನ ಹಿಂಬದಿ ಸಿಲುಕಿದ್ದಾನೆ. ಇದನ್ನು ಗಮನಿಸದ ಚಾಲಕನು ಅದೇ ವೇಗದಲ್ಲಿ ಒಂದು ಕಿ.ಮೀ ಕಾರು ಓಡಿಸಿದ್ದಾನೆ.
ವಿದ್ಯಾರ್ಥಿಯು ಕಾರಿನ ಹಿಂಬದಿ ಸಿಲುಕಿ ಒದ್ದಾಡುತ್ತಿದ್ದನ್ನು ಗಮನಿಸಿದ ಜನ ಕಾರನ್ನು ನಿಲ್ಲಿಸಿದ್ದಾರೆ. ನಂತರ ಬಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಬಾಲಕ ಅಪಾಯದಿಂದ ಪಾರಾಗಿದ್ದಾನೆ. ಇನ್ನು, ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಜನರು ಕಾರನ್ನು ಜಖಂಗೊಳಿಸಿದ್ದಾರೆ.
ಇದನ್ನೂ ಓದಿ | Sultanpuri Like Mishaps | ಉತ್ತರ ಪ್ರದೇಶದಲ್ಲಿ ದೆಹಲಿ ರೀತಿ 2 ಪ್ರತ್ಯೇಕ ಅಪಘಾತ, ಇಬ್ಬರ ದಾರುಣ ಸಾವು