Site icon Vistara News

BBC Documentary On Modi: ದೆಹಲಿಯ ಜಾಮಿಯಾ ವಿವಿಯಲ್ಲೂ ಡಾಕ್ಯುಮೆಂಟರಿ ಸ್ಕ್ರೀನಿಂಗ್‌ ವ್ಯವಸ್ಥೆ, ನಾಲ್ವರ ಸೆರೆ

BBC Documentary On Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಆಕ್ಷೇಪಾರ್ಹ ವಿಚಾರಗಳಿರುವ ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವಶ್ಚನ್‌’ (India: The Modi Question) ಡಾಕ್ಯುಮೆಂಟರಿಯ (BBC Documentary On Modi) ವೀಕ್ಷಣೆಗೆ ಈಗ ಭಾರತದ ವಿವಿಗಳಲ್ಲಿ ಗಲಾಟೆ ನಡೆಯುತ್ತಿದೆ. ಹೈದರಾಬಾದ್‌ ಹಾಗೂ ಜೆಎನ್‌ಯುನಲ್ಲಿ ಡಾಕ್ಯುಮೆಂಟರಿ ವೀಕ್ಷಣೆಗೆ ದೊಡ್ಡ ಪರದೆಯ ವ್ಯವಸ್ಥೆ ಮಾಡಿರುವುದು ಗಲಾಟೆಗೆ ಕಾರಣವಾದ ಬೆನ್ನಲ್ಲೇ ಈಗ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ಬುಧವಾರ ಸಂಜೆ 6 ಗಂಟೆಗೆ ಸಾಕ್ಷ್ಯಚಿತ್ರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಡಾಕ್ಯುಮೆಂಟರಿಯ ವೀಕ್ಷಣೆಗೆ ಅನುಮತಿ ನಿರಾಕರಿಸಿದರೂ ಸ್ಟುಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (SFI) ವಿದ್ಯಾರ್ಥಿ ಸಂಘಟನೆಯಿಂದ ದೊಡ್ಡ ಪರದೆಯ ವ್ಯವಸ್ಥೆ ಮಾಡಿದೆ. ಮತ್ತೆ ಗಲಾಟೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಜಾಮಿಯಾ ಮಿಲ್ಲಿಯಾ ವಿವಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಅಲ್ಲದೆ, ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ನಾಲ್ವರೂ ವಿವಿಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಯಾರ‍್ಯಾರ ಬಂಧನ?

ಎಸ್‌ಎಫ್‌ಐ ಜಾಮಿಯಾ ಘಟಕದ ಕಾರ್ಯದರ್ಶಿ ಅಜೀಜ್‌, ಎಸ್‌ಎಫ್‌ಐ ದಕ್ಷಿಣ ದೆಹಲಿ ಪ್ರದೇಶದ ಉಪಾಧ್ಯಕ್ಷೆ ನಿವೇದ್ಯಾ, ಎಸ್‌ಎಫ್‌ಐ ಯುನಿಟ್‌ ಸದಸ್ಯರಾದ ಅಭಿರಾಮ್‌ ಹಾಗೂ ತೇಜಸ್‌ ಎಂಬುವವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಜೆಎನ್‌ಯುನಲ್ಲಿ ಡಾಕ್ಯುಮೆಂಟರಿ ವೀಕ್ಷಣೆ ವೇಳೆ ವಿದ್ಯುತ್‌ ಕಡಿತಗೊಂಡ ಕಾರಣ ಕಲ್ಲುತೂರಾಟ ನಡೆದಿತ್ತು. ಹಾಗಾಗಿ, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: BBC Documentary: ಬಿಬಿಸಿಯ ಗುಜರಾತ್ ದಂಗೆಯ ಡಾಕ್ಯುಮೆಂಟರಿ ಪ್ರಶ್ನಿಸಿದ್ದ ಕಾಂಗ್ರೆಸ್ ನಾಯಕ ಆ್ಯಂಟನಿ ಪುತ್ರ ಪಕ್ಷಕ್ಕೆ ರಾಜೀನಾಮೆ!

Exit mobile version