Site icon Vistara News

West Bengal Horror: ಮಣಿಪುರ ಬೆನ್ನಲ್ಲೇ ಬಂಗಾಳದಲ್ಲಿ ಇಬ್ಬರು ಆದಿವಾಸಿ ಮಹಿಳೆಯರ ಬೆತ್ತಲೆ ಮೆರವಣಿಗೆ

West Bengal Women Paraded

After Manipur, 2 women beaten, paraded half-naked in West Bengal

ಕೋಲ್ಕೊತಾ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅವರನ್ನು ಅಮಾನುಷವಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಮಣಿಪುರ ಪೊಲೀಸರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಮಹಿಳಾ ಆಯೋಗದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಮಣಿಪುರದ ರೀತಿಯಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮಹಿಳೆಯರನ್ನು (West Bengal Horror) ಅರೆಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪಕೌಹತ್‌ ಗ್ರಾಮದಲ್ಲಿ ಇಬ್ಬರು ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಅವರ ಬಟ್ಟೆ ಹರಿದು, ಅರೆಬೆತ್ತಲೆಯಾಗಿ ಇಬ್ಬರನ್ನೂ ಮೆರವಣಿಗೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಮೂರ್ನಾಲ್ಕು ದಿನಗಳ ಹಿಂದೆ ಘಟನೆ (July 19) ನಡೆದಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಆದರೆ, ಘಟನೆ ಕುರಿತು ಇದುವರೆಗೆ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರ ಮೇಲೆ ದೌರ್ಜನ್ಯದ ವಿಡಿಯೊ

ಇಬ್ಬರು ಮಹಿಳೆಯರು ಕಳ್ಳತನ ಮಾಡಿದರು ಎಂಬ ಕಾರಣಕ್ಕಾಗಿ ಗ್ರಾಮಸ್ಥರು ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ಸುಮ್ಮನಿರದೆ ಅವರನ್ನು ರಸ್ತೆಯ ಮೇಲೆ ನಡೆಸಿಕೊಂಡು ಹೋಗಿ ಮೆರವಣಿಗೆ ಮಾಡಿದ್ದಾರೆ. ಕೆಲವು ಮಹಿಳೆಯರು ಕೂಡ ಇಬ್ಬರ ಮೇಲೆ ಹಲ್ಲೆ ನಡೆಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದಿರುವುದು ನಿಜ. ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪಶ್ಚಿಮ ಬಂಗಾಳ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Manipur Video: ಮಣಿಪುರ ದೌರ್ಜನ್ಯ; 5ನೇ ಆರೋಪಿ ಬಂಧನ, ಧ್ವನಿ ಎತ್ತಲು ಮಹಿಳಾ ಆಯೋಗವೂ ನಿರ್ಲಕ್ಷ್ಯ?

ಘಟನೆ ಖಂಡಿಸಿದ ಸಿಪಿಎಂ ನಾಯಕಿ

ದೀದಿ ವಿರುದ್ಧ ಬಿಜೆಪಿ ಟೀಕೆ

ಪಶ್ಚಿಮ ಬಂಗಾಳದಲ್ಲಿ ಇಬ್ಬರು ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಜುಲೈ 19ರಂದು ಇಬ್ಬರು ಮಹಿಳೆಯರ ಮೆರವಣಿಗೆ ನಡೆದಿದೆ. ಇಷ್ಟಾದರೂ ಮಮತಾ ಬ್ಯಾನರ್ಜಿ ಅವರ ಮನಸ್ಸಿಗೆ ಯಾವುದೇ ಘಾಸಿಯಾಗಿಲ್ಲ. ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಿಲ್ಲ. ಕನಿಷ್ಠ ಖಂಡನೆಯನ್ನೂ ವ್ಯಕ್ತಪಡಿಸಿಲ್ಲ. ಇದು ಮಮತಾ ಬ್ಯಾನರ್ಜಿ ಅವರ ಮನಸ್ಥಿತಿ ಹಾಗೂ ಸರ್ಕಾರದ ಆಡಳಿತ ವೈಖರಿ” ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಟ್ವೀಟ್‌ ಮಾಡುವ ಮೂಲಕ ಟೀಕಿಸಿದ್ದಾರೆ.

Exit mobile version