ಮುಂಬಯಿ: ಮಹಾರಾಷ್ಟ್ರದ ೫೬ ಶಿವಸೇನೆ ಶಾಸಕರ ಪೈಕಿ ೪೦ಕ್ಕೂ ಅಧಿಕ ಮಂದಿಯನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿರುವ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಇದೀಗ ಮುಂಬಯಿ ಸೇರಿದಂತೆ ರಾಜ್ಯದ ನಾನಾ ಮಹಾನಗರ ಪಾಲಿಕೆಗಳ ಕಾರ್ಪೊರೇಟರ್‌ಗಳನ್ನೂ ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಬಲವನ್ನು ಕ್ಷಣ ಕ್ಷಣಕ್ಕೂ ಕುಗ್ಗಿಸುತ್ತಿದ್ದಾರೆ.
ಮೂರನೇ ಎರಡು ಶಾಸಕರ ಬಲವನ್ನು ಹೊಂದಿರುವ ಏಕನಾಥ್ ಶಿಂಧೆ ಬಣ ಈಗ ಸ್ವತಂತ್ರವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅರ್ಹತೆಯನ್ನು ಪಡೆಯುತ್ತದೆ. ಶಾಸಕರು ಯಾವ ಪಕ್ಷದೊಂದಿಗೆ ಗುರುತಿಸಿಕೊಂಡರೂ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗುವುದಿಲ್ಲ. ಆದರೆ, ಏಕನಾಥ್ ಶಿಂಧೆ ಅವರ ಗುರಿ ಅದೊಂದೇ ಅಲ್ಲ. ಅವರು ಇಡೀ ಪಕ್ಷವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಬೇಕು, ಒಂದೊಮ್ಮೆ ವಿಭಜನೆ ಅನಿವಾರ್ಯವಾದರೂ ಪಕ್ಷದ ಚಿಹ್ನೆ ತಮಗೆ ಬರಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಯಾವುದೇ ರಾಜಕೀಯ ಗುಂಪು ವಿಭಜನೆಯ ಬಳಿಕ ಚಿಹ್ನೆಯನ್ನು ಪಡೆಯಬೇಕಾದರೆ ಶಾಸಕರ ಸಂಖ್ಯೆ, ಸಂಸದರ ಸಂಖ್ಯೆಯ ಜತೆಗೆ ಪದಾಧಿಕಾರಿಗಳ ಮಟ್ಟದಲ್ಲೂ ಇರುವ ಬಲಾಬಲವನ್ನು ಚುನಾವಣಾ ಆಯೋಗ ಪರಿಗಣಿಸುತ್ತದೆ. ಹೀಗಾಗಿ ಪದಾಧಿಕಾರಿಗಳು ಹಾಗೂ ಪಾಲಿಕೆಗಳ ಕಾರ್ಪೊರೇಟರ್‌ಗಳ ಹಂತದಲ್ಲೇ ಗಟ್ಟಿಯಾಗುವ ಪ್ರಯತ್ನವನ್ನು ಏಕನಾಥ್ ಶಿಂಧೆ ಗುವಾಹಟಿಯಲ್ಲೇ ಕುಳಿತು ಮಾಡುತ್ತಿದ್ದಾರೆ.
ಹಿಂದಿನಿಂದಲೂ ಶಿವಸೇನೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಶಿಂಧೆ ಅವರಿಗೆ ರಾಜ್ಯಾದ್ಯಂತ ಹಿಂಬಾಲಕರಿದ್ದಾರೆ. ಅವರೆಲ್ಲರೂ ಇದೀಗ ಬಹಿರಂಗವಾಗಿ ಶಿಂಧೆ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಠಾಣೆ ಮಹಾನಗರ ಪಾಲಿಕೆಯ ೬೦ ಕಾರ್ಪೊರೇಟರ್‌ಗಳು ತಮ್ಮ ಬೆಂಬಲ ಏಕನಾಥ್ ಶಿಂಧೆ ಅವರಿಗೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಅಲ್ಲಿನ ಮೇಯರ್ ಕೂಡಾ ಶಿಂಧೆ ಬೆಂಬಲಕ್ಕೆ ನಿಂತಿದ್ದಾರೆ.
ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳ ಬೆಂಬಲವನ್ನು ಪಡೆಯುವ ಪ್ರಯತ್ನವೂ ನಡೆಯುತ್ತಿದೆ. ಶಾಸಕರು ದೊಡ್ಡ ಸಂಖ್ಯೆಯಲ್ಲಿ ಶಿಂಧೆ ಅವರನ್ನು ಬೆಂಬಲಿಸುತ್ತಿರುವುದರಿಂದ ಕಾರ್ಪರೇಟರ್ ಗಳು ಕೂಡಾ ಬೆಂಬಲ ನೀಡಬಹುದು ಎಂಬ ಅಭಿಪ್ರಾಯವಿದೆ.
ಈ ಬೆಳವಣಿಗೆಗಳು ಶಿವಸೇನೆಯ ಪ್ರಧಾನ ಸೇನಾನಿ ಎಂದೇ ಗುರುತಿಸಲಾಗಿದ್ದ ಉದ್ಧವ್ ಠಾಕ್ರೆ ಅವರು ಶಿವಸೇನೆಯ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಿರುವುದನ್ನು ತೋರಿಸುತ್ತಿದೆ. ಈಗಾಗಲೇ ಅವರೊಂದಿಗೆ ಇರುವ ಶಾಸಕರ ಬಲ ೧೩-೧೪ಕ್ಕೆ ಇಳಿದಿದೆ ಎನ್ನಲಾಗಿದ್ದು, ಏಕನಾಥ್ ಶಿಂಧೆ ಬಣದ ಕೈಮೇಲಾಗಿದೆ. ೧೯ ಸಂಸದರ ಪೈಕಿ ೧೪ ಮಂದಿ ಏಕನಾಥ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇದನ್ನೂ ಓದಿ| ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿರುವ ಏಕನಾಥ್ ಶಿಂಧೆ ಯಾರು?