ನವದೆಹಲಿ: ಆತ ಸಾಮಾನ್ಯ ವ್ಯಕ್ತಿಯೇ ಆಗಿರಲಿ, ದೊಡ್ಡ ನಾಯಕನೇ ಆಗಿರಲಿ. ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುಃಖ ಬೇರೊಂದು ಇರಲು ಸಾಧ್ಯವೇ ಇರುವುದಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅಗಲಿದ ತಾಯಿಗೆ ಹೆಗಲು ಕೊಟ್ಟು, ಅಂತ್ಯಸಂಸ್ಕಾರ ನೆರವೇರಿಸಿದ ಬಳಿಕ ದೇಶದ ಜನ ನೀಡಿದ ಕರ್ತವ್ಯಕ್ಕೆ ಅಣಿಯಾದರು. ಕಣ್ಣಾಲಿಗಳು ತೇವವಾಗಿದ್ದರೂ, ಮನಸ್ಸು ಭಾರವಾಗಿದ್ದರೂ, ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಅಭಿವೃದ್ಧಿ ಕುರಿತು ಮಾತನಾಡಿದರು. ಹಾಗಾದರೆ, ಹೀರಾಬೆನ್ ಅವರ ಅಂತ್ಯಸಂಸ್ಕಾರದ ಬಳಿಕ ಮೋದಿ ಏನೆಲ್ಲ ಮಾಡಿದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಗಂಗಾ ಸಮಿತಿ ಸಭೆ
ಮಾತೋಶ್ರೀಯ ಅಂತ್ಯಸಂಸ್ಕಾರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕೊತಾದಲ್ಲಿ ನಡೆದ ರಾಷ್ಟ್ರೀಯ ಗಂಗಾ ಸಮಿತಿ (NGC) ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗಿಯಾದರು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರನ್ನು ಒಳಗೊಂಡ ಸಭೆಯಲ್ಲಿ ಪಾಲ್ಗೊಂಡ ಮೋದಿ ನಮಾಮಿ ಗಂಗೆ ಯೋಜನೆಯ ಯಶಸ್ಸಿನ ಕುರಿತು ಮಾಹಿತಿ ಪಡೆದರು. ಮುಂದಿನ ಕ್ರಮಗಳ ಕುರಿತು ಕೂಡ ಚರ್ಚಿಸಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ
ನಮಾಮಿ ಗಂಗೆ ಸಭೆ ಬಳಿಕ ಮೋದಿ ಅವರು ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂಜಲಪಾಯಿವರೆಗೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವರ್ಚ್ಯುವಲ್ ಆಗಿ ಚಾಲನೆ ನೀಡಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ “ನೀವು ರೆಸ್ಟ್ ಮಾಡಿ” ಎಂದು ಮೋದಿ ಅವರಿಗೆ ಮನವಿ ಮಾಡಿದರೂ ಪ್ರಧಾನಿ ಕೇಳಲಿಲ್ಲ. ರೈಲು ಯೋಜನೆಗಳು ಸೇರಿ ಪಶ್ಚಿಮ ಬಂಗಾಳದಲ್ಲಿ ಒಟ್ಟು 7,800 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.
ರಿಷಭ್ ಪಂತ್ ಕುಟುಂಬಕ್ಕೆ ಧೈರ್ಯ ತುಂಬಿದ ಪ್ರಧಾನಿ
ಭೀಕರ ಕಾರು ಅಪಘಾತದಿಂದಾಗಿ ಆಸ್ಪತ್ರೆ ಸೇರಿರುವ ಯುವ ಕ್ರಿಕೆಟರ್ ರಿಷಭ್ ಪಂತ್ ಅವರ ಕುಟುಂಬಸ್ಥರ ಜತೆ ದೂರವಾಣಿ ಮೂಲಕ ಮಾತನಾಡಿದ ಮೋದಿ ಧೈರ್ಯ ತುಂಬಿದರು. “ರಿಷಭ್ ಪಂತ್ ಅವರ ತಾಯಿ ಸೇರಿ ಹಲವರೊಂದಿಗೆ ಮಾತನಾಡಿದ ಮೋದಿ ಪಂತ್ ಆರೋಗ್ಯವನ್ನು ವಿಚಾರಿಸಿದ್ದಾರೆ. ಅವರು ಸಾಂತ್ವನದ ಮಾತುಗಳಿಗೆ ನಾವು ಚಿರಋಣಿ” ಎಂಬುದಾಗಿ ಬಿಸಿಸಿಐ ಟ್ವೀಟ್ ಮಾಡಿದೆ. ಆ ಮೂಲಕ ತಾವೇ ದುಃಖದಲ್ಲಿದ್ದರೂ ಯುವ ಕ್ರಿಕೆಟಿಗನ ಆರೋಗ್ಯ ವಿಚಾರಿಸಿ, ಅವರ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ಯಾರಿಗೂ ಕಾರ್ಯಕ್ರಮ ರದ್ದುಗೊಳಿಸದಂತೆ ಸೂಚನೆ
ನರೇಂದ್ರ ಮೋದಿ ಅವರು ತಾವು ಮಾತ್ರವಲ್ಲ ತಮ್ಮ ಸಂಪುಟ ಸಚಿವರು ಕೂಡ ಯಾವುದೇ ಕಾರ್ಯಕ್ರಮ ರದ್ದುಗೊಳಿಸದಂತೆ ಸೂಚಿಸಿದ್ದರು. ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ ಹೇಳಿದ್ದಾರೆ. ಹಾಗಾಗಿ, ಅಮಿತ್ ಶಾ ಸೇರಿ ಎಲ್ಲ ಸಚಿವರು ತಮ್ಮ ತಮ್ಮ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಇದನ್ನೂ ಓದಿ | Heeraben Modi | ಬಾಳಿದಷ್ಟೇ ಸರಳವಾಗಿ ಭಗವಂತನಲ್ಲಿ ಲೀನವಾದರು ತಾಯಿ ಹೀರಾಬೆನ್; ಪ್ರಧಾನಿ ಮೋದಿ ಸೂಚನೆ ಏನಿತ್ತು?