ನವದೆಹಲಿ: ತೀವ್ರ ಕುತೂಹಲ, ಜಿದ್ದಾಜಿದ್ದಿನಿಂದ ಕೂಡಿದ್ದ ರಾಜ್ಯಸಭೆ ಚುನಾವಣೆ (Rajya Sabha Election) ಮುಕ್ತಾಯಗೊಂಡಿದೆ. ಅದರಲ್ಲೂ, ಕರ್ನಾಟಕ, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿತ್ತು. ಕರ್ನಾಟಕದ (Karnataka) ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್ 3, ಬಿಜೆಪಿ 1, ಉತ್ತರ ಪ್ರದೇಶದ 10 ಸ್ಥಾನಗಳಲ್ಲಿ ಬಿಜೆಪಿ 8, ಎಸ್‌ಪಿ 2 ಹಾಗೂ ಹಿಮಾಚಲ ಪ್ರದೇಶದ ಒಂದು ಸ್ಥಾನವನ್ನು ಬಿಜೆಪಿ ಪಡೆದಿದೆ. ಅವಿರೋಧ ಆಯ್ಕೆ ಹಾಗೂ ಚುನಾವಣೆ ಗೆಲುವಿನ ಬಳಿಕ ರಾಜ್ಯಸಭೆಯಲ್ಲಿ (Rajya Sabha) ಬಿಜೆಪಿಯು (BJP) ಬಹುಮತದತ್ತ ದಾಪುಗಾಲು ಇಟ್ಟಿದೆ.
ಬಿಜೆಪಿಯು 56 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 30 ಸ್ಥಾನಗಳಲ್ಲಿ (20 ಸದಸ್ಯರು ಅವಿರೋಧ ಆಯ್ಕೆ, 10 ಸದಸ್ಯರಿಗೆ ಚುನಾವಣೆಯಲ್ಲಿ ಗೆಲುವು) ಜಯ ಸಾಧಿಸಿದೆ. ಇದರೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಮೇಲ್ಮನೆಯಲ್ಲಿ ಎನ್‌ಡಿಎ ಒಕ್ಕೂಟದ ಬಲವು 117ಕ್ಕೆ ಏರಿಕೆಯಾಗಿದೆ. ಒಟ್ಟು 240 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 121 ಸದಸ್ಯರ ಅಗತ್ಯವಿದೆ. ಇನ್ನೂ 4 ಸದಸ್ಯರಾದರೆ, ಎನ್‌ಡಿಎ ಬಹುಮತ ಸಾಧಿಸಲಿದೆ. ಆ ಮೂಲಕ ಇತಿಹಾಸ ಸೃಷ್ಟಿಸಲಿದೆ.
ಮೇಲ್ಮನೆಯಲ್ಲಿ ಪಕ್ಷವಾರು ಬಲಾಬಲ
56 ಕ್ಷೇತ್ರಗಳಿಗೆ ಚುನಾವಣೆ ನಡೆದ ಬಳಿಕ ಬಿಜೆಪಿಯು 97 ಸದಸ್ಯರೊಂದಿಗೆ ಮೇಲ್ಮನೆಯ ಬೃಹತ್ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್ 29, ತೃಣಮೂಲ ಕಾಂಗ್ರೆಸ್ 13, ಡಿಎಂಕೆ ಹಾಗೂ ಆಪ್ ತಲಾ 10, ಬಿಜೆಪಿ ಹಾಗೂ ವೈಎಸ್‌ಆರ್‌ಸಿಪಿ ತಲಾ 9, ಬಿಆರ್‌ಎಸ್ 7, ಆರ್‌ಜೆಡಿ 6, ಸಿಪಿಎಂ 5, ಎಐಎಡಿಎಂಕೆ ಹಾಗೂ ಜೆಡಿಯು ತಲಾ 4 ಸದಸ್ಯರನ್ನು ಹೊಂದಿದೆ. ಇತ್ತೀಚೆಗೆ ನಡೆದ ಚುನಾವಣೆ ವೇಳೆ 56 ಸ್ಥಾನಗಳ ಪೈಕಿ 41 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿಯ 20, ಕಾಂಗ್ರೆಸ್ 6, ಟಿಎಂಸಿ 4, ವೈಎಸ್‌ಆರ್ ಕಾಂಗ್ರೆಸ್ 3, ಆರ್‌ಜೆಡಿ 2, ಬಿಜೆಪಿ 2 ಹಾಗೂ ಎನ್‌ಸಿಪಿ, ಶಿವಸೇನೆ, ಬಿಆರ್‌ಎಸ್ ಮತ್ತು ಜೆಡಿಯು ತಲಾ 1 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಸೋಮವಾರ 15 ಸ್ಥಾನಗಳಿಗೆ ನಡೆದ ಚುನಾವಣೆ ವೇಳೆ ಅಡ್ಡ ಮತದಾನದ ಪರಿಣಾಮ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡಿದೆ. ಉತ್ತರ ಪ್ರದೇಶದಲ್ಲೂ ಅಡ್ಡ ಮತದಾನದ ಏಟಿಗೆ ಸಮಾಜವಾದಿ ಪಕ್ಷವು ಒಂದು ಸ್ಥಾನ ಕಳೆದುಕೊಂಡಿದೆ. ರಾಜ್ಯಸಭೆಯು ಒಟ್ಟು 245 ಸದಸ್ಯ ಬಲವನ್ನು ಹೊಂದಿದೆ. ಜಮ್ಮು-ಕಾಶ್ಮೀರದಿಂದ ನಾಲ್ವರು ಸದಸ್ಯರು ಆಯ್ಕೆಯಾಗಬೇಕಿದೆ. ಇನ್ನು ನಾಮನಿರ್ದೇಶಿತರ ವರ್ಗದಿಂದ ಒಬ್ಬ ಸದಸ್ಯರ ನಾಮನಿರ್ದೇಶನವಾಗಬೇಕಿದೆ. ಹಾಗಾಗಿ, ಕೆಲವೇ ತಿಂಗಳಲ್ಲಿ ಬಿಜೆಪಿಯು ರಾಜ್ಯಸಭೆಯಲ್ಲಿ ಬಹುಮತ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ