Site icon Vistara News

ಎಲೆಕ್ಟ್ರಿಕ್‌ ಸ್ಕೂಟರ್‌, ಕಾರು, ಬಸ್‌ ಆಯ್ತು; ಸದ್ಯವೇ ಬರಲಿದೆ ಟ್ರಕ್‌, ಟ್ರ್ಯಾಕ್ಟರ್‌!

ಪುಣೆ: ಎಲೆಕ್ಟ್ರಿಕ್‌ ಸ್ಕೂಟರ್ ಆಯ್ತು, ಕಾರುಗಳೂ ಬಂದವು, ಬಸ್‌ಗಳೂ ರಸ್ತೆಯಲ್ಲಿ ಓಡಾಡುತ್ತಿವೆ. ಶೀಘ್ರವೇ ಎಲೆಕ್ಟ್ರಿಕ್‌ ಟ್ರಕ್‌ಗಳು, ಟ್ರ್ಯಾಕ್ಟರ್‌ಗಳೂ ಬೀದಿಗೆ ಇಳಿಯಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಇವಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಾರು ಮತ್ತು ಸ್ಕೂಟರ್‌ಗಳು ವಿಪರೀತವಾಗಿ ಜನರನ್ನು ಆಕರ್ಷಿಸುತ್ತಿವೆ ಎಂದು ಹೇಳಿದರು. ಪೆಟ್ರೋಲ್‌ಗೆ ಪರ್ಯಾಯವಾಗಿ ಎಥನಾಲ್‌ ಮತ್ತು ಮೆಥನಾಲ್‌ ಬಳಸಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಪೆಟ್ರೋಲ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಒಂದು ಕಾಲದಲ್ಲಿ ಎಲೆಕ್ಟ್ರಿಕ್‌ ವಾಹನಗಳು ಬರಲಿವೆ ಎಂದು ಹೇಳಿದಾಗ ಜನರು ತಮಾಷೆ ಮಾಡಿದ್ದರು ಎಂದು ನೆನಪಿಸಿಕೊಂಡರು.
ʻʻನನಗೆ ಚೆನ್ನಾಗಿ ನೆನಪಿದೆ. ಮೂರು ವರ್ಷಗಳ ಹಿಂದೆ ನಾನು ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬರಲಿದೆ, ಕಾರುಗಳು ಬರಲಿವೆ ಎಂದಾಗ ಜನರು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ, ಈಗ ಜನರ ನಡುವೆಯೇ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಷ್ಟರ ಮಟ್ಟಿಗೆ ಎಂದರೆ ಇವು ತಕ್ಷಣಕ್ಕೆ ಸಿಗುವುದಿಲ್ಲ. ಜನರು ಕಾದು ಕುಳಿತು ಖರೀದಿಸಬೇಕಾದ ಸ್ಥಿತಿ ಇದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಟ್ರಕ್‌ ಮತ್ತು ಟ್ರ್ಯಾಕ್ಟರ್‌ಗಳು ಕೂಡಾ ಬರಲಿವೆ. ತಾವೇ ಅದನ್ನು ಬಿಡುಗಡೆ ಮಾಡಲಿದ್ದೇವೆ ಎಂದು ನಿತಿನ್‌ ಗಡ್ಕರಿ ಹೇಳಿದರು.

2 ವರ್ಷದಲ್ಲಿ 3 ಕೋಟಿ ಇವಿ
ದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಮೂರು ಕೋಟಿ ವಿದ್ಯುತ್‌ ವಾಹನಗಳು ಮಾರಾಟವಾಗಲಿವೆ ಎಂದು ಗಡ್ಕರಿ ಹೇಳಿದ್ದಾರೆ. ಸ್ಕೂಟರ್‌ ಮತ್ತು ಕಾರುಗಳಿಗೆ ಸೃಷ್ಟಿಯಾಗಿರುವ ಬೇಡಿಕೆಗಳಿಗೆ ಹಿನ್ನೆಲೆಯಲ್ಲಿ ಕಂಪನಿಗಳೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾಗಿವೆ ಎಂದು ಗಡ್ಕರಿ ತಿಳಿಸಿದರು.

ಸಮಾನ ಬೆಲೆಗೆ ಮಾರಾಟ
ಸದ್ಯ ವಿದ್ಯುತ್‌ ಚಾಲಿತ ವಾಹನಗಳಿಗೆ ತೈಲಾಧರಿತ ವಾಹನಗಳಿಗಿಂತ ಹೆಚ್ಚಿನ ಬೆಲೆ ಇದೆ. ಹೀಗಾಗಿ ಕೆಲವರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿತಿನ್‌ ಗಡ್ಕರಿ ಅವರು ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಕೇಂದ್ರ ಸರಕಾರ ಸಬ್ಸಿಡಿಯನ್ನು ನೀಡುವ ಪ್ರಸ್ತಾಪ ಹೊಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎರಡೂ ವಾಹನಗಳ ಬೆಲೆ ಒಂದೇ ರೀತಿ ಆಗುವ ಸಾಧ್ಯತೆ ಇದೆ ಎಂದರು.

ʼʼಮುಂದಿನ ಎರಡು ವರ್ಷಗಳಲ್ಲಿ ಸಹಜವಾಗಿಯೇ ತೈಲಾಧರಿತ ಮತ್ತು ವಿದ್ಯುತ್‌ ಚಾಲಿತ ವಾಹನಗಳ ಬೆಲೆ ಒಂದೇ ರೀತಿ ಆಗಲಿವೆ. ಅದರಲ್ಲೂ ಸ್ಕೂಟರ್‌, ಕಾರು, ಆಟೊ ರಿಕ್ಷಾಗಳ ಬೆಲೆ ಒಂದೇ ಆಗಲಿದೆ. ಲಿಥಿಯಂ ಅಯಾನ್‌ ಬ್ಯಾಟರಿಗಳ ಬೆಲೆಯೂ ಕಡಿಮೆ ಆಗಲಿದೆ. ಜತೆಗೆ ನಾವು ಝಿಂಕ್‌ ಅಯಾನ್‌, ಅಲ್ಯುಮಿನಿಯಂ ಅಯಾನ್‌, ಸೋಡಿಯಂ ಅಯಾನ್‌ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆಸುತ್ತಿದ್ದೇವೆ,ʼʼ ಎಂದರು ಗಡ್ಕರಿ.

ಚಾರ್ಜಿಂಗ್‌ ಪಾಯಿಂಟ್‌ ಹೆಚ್ಚಳ
ವಿದ್ಯುತ್‌ ಚಾಲಿತ ವಾಹನಗಳಿಗೆ ಚಾರ್ಜಿಂಗ್‌ ಪಾಯಿಂಟ್‌ಗಳ ಅಗತ್ಯ ಹೆಚ್ಚಾಗಿದ್ದು, ಇದಕ್ಕೆ ಪೂರಕವಾಗಿ ಪ್ರಮುಖ ಹೆದ್ದಾರಿಗಳಲ್ಲಿ ಹೆಚ್ಚುವರಿಯಾಗಿ 600 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ನಿರ್ಮಿಸಲಾಗುವುದು ಎಂದೂ ಗಡ್ಕರಿ ತಿಳಿಸಿದ್ದಾರೆ.

ಇವಿಯೇ ಅಗ್ಗವಾಗಬೇಕು
ಕೇಂದ್ರ ಸರಕಾರವು ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಲಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್‌ ವಾಹನಗಳೇ ಅಗ್ಗ ಅನಿಸುವಂತಾಗಲಿದೆ ಎಂದರು. ಪೆಟ್ರೋಲ್‌ ಇಲ್ಲವೇ ಡೀಸೆಲ್‌ಗೆ ಖರ್ಚು ಮಾಡುವ ಮೊತ್ತದ ಅರ್ಧ ವೆಚ್ಚದಲ್ಲಿ ವಿದ್ಯುತ್‌ ಚಾಲಿತ ವಾಹನಗಳು ಓಡಾಡಲಿವೆ ಎಂದು ಹೇಳಿದರು.

ಗಡ್ಕರಿ ಅವರು ಇಷ್ಟೆಲ್ಲ ಹೇಳಿದರೂ, ಕಂಪನಿಗಳು ಸ್ಪಷ್ಟನೆ ನೀಡಿದರೂ ವಿದ್ಯುತ್‌ ಚಾಲಿತ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು ಜನರಲ್ಲಿ ಆತಂಕ ಮೂಡಿದ್ದು ಸುಳ್ಳಲ್ಲ.

ಇದನ್ನೂ ಓದಿ | ಎಲೆಕ್ಟ್ರಿಕ್‌ ವಾಹನ ಜನಪ್ರಿಯತೆ ಹೆಚ್ಚಳ: ಹೈಡ್ರೋಜನ್‌ನತ್ತಲೂ ಸರ್ಕಾರದ ಚಿತ್ತ

Exit mobile version