ನವದೆಹಲಿ: ಮಹಾರಾಷ್ಟ್ರದ ಒಟ್ಟು ರಾಜಕೀಯ ಚಿತ್ರಣವನ್ನು ಬದಲಿಸಿರುವ ಭಾರತೀಯ ಜನತಾ ಪಾರ್ಟಿ (BJP) ಮತ್ತೊಂದು ರಾಜಕೀಯ ಪಲ್ಲಟಕ್ಕೆ ಹೊಂಚು ಹಾಕಿದೆ ಎಂದು ತಿಳಿದು ಬಂದಿದೆ. ಈಗಾಲೇ ಶಿವಸೇನೆ (Shiv Sena) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಗಳನ್ನು (NCP Crisis) ಒಡೆದು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿಯ ಮುಂದಿನ ಟಾರ್ಗೆಟ್ ಕಾಂಗ್ರೆಸ್ ಪಕ್ಷ (Congress Party) ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಬಿಜೆಪಿ ತನ್ನ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಮುಖ ನಾಯಕರು ಈಗಾಗಲೇ ಬಿಜೆಪಿಯ ಸಂಪರ್ಕದಲ್ಲಿದ್ದು, ಚರ್ಚೆ ನಡೆಸಿದ್ದಾರೆ. ಬಿಜೆಪಿ ಮತ್ತು ಕೆಲವು ಕಾಂಗ್ರೆಸ್ಸಿಗರ ನಡುವೆ ಸಂಬಂಧವು ಮತ್ತೊಂದು ಹಂತಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ನಾಯಕ ಹಾಗೂ ಅರಣ್ಯ ಸಚಿವ ಸುಧೀರ್ ಮುನಂಗಟಿವಾರ ಅವರು ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಕೆಲವು ನಾಯಕರು ತೊರೆಯಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು.
ಕಾಂಗ್ರೆಸ್ ಮಾತ್ರವಲ್ಲ, ಇತರ ಪಕ್ಷಗಳ ಹಲವರಿಗೆ ತಮ್ಮ ನಾಯಕರ ಸ್ವಹಿತಾಸಕ್ತಿಗಳ ಬಗ್ಗೆ ಬೇಸರವಿದೆ. ಆ ನಾಯಕರು ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಪಾಕಿಸ್ತಾನ ಮತ್ತು ಚೀನಾದಂತೆ ಈ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೇಡವಾಗಿದ್ದಾರೆ ಎಂದು ಸಚಿವ ಸುಧೀರ್ ಸುಧೀರ್ ಮುನಂಗಟಿವಾರ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Ajit Pawar: ಒಡೆಯಿತು ಎನ್‌ಸಿಪಿ; ಶಿಂದೆ ಸರ್ಕಾರ ಸೇರಿದ ಅಜಿತ್ ಪವಾರ್ ‘ಮಹಾ’ ಉಪಮುಖ್ಯಮಂತ್ರಿ!
ಕಾಂಗ್ರೆಸ್ ಪಕ್ಷವನ್ನು ಒಡೆಯುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಬೇಕಿದ್ದರೆ ಕನಿಷ್ಠ 30 ಶಾಸಕರು ಪಕ್ಷವನ್ನು ಬಿಡಬೇಕಾಗುತ್ತದೆ. ಆದರೆ, ಅದು ಅಸಾಧ್ಯದ ಮಾತು. ಒಂದಿಬ್ಬರು ಪಕ್ಷವನ್ನು ಬಿಟ್ಟು ಹೋಗಬಹುದು ಎಂದು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಅಜಿತ್ ಪವಾರ್ ಎನ್‌ಸಿಪಿಯಲ್ಲಿ ಬಂಡಾಯವೆದ್ದು ಬಿಜೆಪಿ-ಶಿಂಧೆ ಸರ್ಕಾರವನ್ನು ಸೇರಿಕೊಂಡ ನಂತರ ಕಾಂಗ್ರೆಸ್ ಹೆಚ್ಚು ಎಚ್ಚರಿಕೆಯನ್ನು ವಹಿಸುತ್ತಿದೆ. ಸೋಮವಾರ ಬೆಳಗ್ಗೆ ಕೂಡ ಕಾಂಗ್ರೆಸ್ ಪಕ್ಷ ಸಭೆ ನಡೆಸಿತು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್ ಚವಾಣ್ ಅವರು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.